'ಚುನಾವಣೆ ಕಾರ್ಯಕ್ಕೆ ಬಳಕೆ ಇಲ್ಲ'
ಯಾದಗಿರಿ: ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಅನ್ವಯ ಯಾವುದೇ ರಾಜಕೀಯ ಪಕ್ಷಗಳು ದೇವಸ್ಥಾನ, ಮಂದಿರ, ಗುಡಿ, ಚರ್ಚ್, ಮಸೀದಿಂತಹ ಧಾರ್ಮಿಕ ಸ್ಥಳಗಳನ್ನು ಚುನಾವಣೆ ಪ್ರಚಾರ ಕಾರ್ಯಕ್ಕೆ ಬಳಸುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಒಂದು ವೇಳೆ ಈ ವಿಷಯದಲ್ಲಿ ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಯಾವುದೇ ಗುತ್ತಿಗೆದಾರ, ವ್ಯಕ್ತಿ, ಪಂಗಡ ಅಥವಾ ಪಕ್ಷದಿಂದ ಹೊಸ ಕೊಳವೆ ಬಾವಿ ಕೊರೆಯುವುದು, ಪರವಾನಗಿ ಇಲ್ಲದೇ ಹೊಸ ಕಾಮಗಾರಿಗಳನ್ನು ನೇರ ಅಥವಾ ಪರೋಕ್ಷವಾಗಿ ಮಾಡಬಾರದು. ಚುನಾವಣೆ ಮುಕ್ತ, ನ್ಯಾಯಸಮ್ಮತ, ಶಾಂತಿಯುತವಾಗಿ ನಡೆಸಲು ಜಿಲ್ಲೆಯ ಎಲ್ಲ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೇಟರಿಂಗ್ ಮತ್ತು ಖಾನಾವಳಿ ಸೇವೆ ಒದಗಿಸುವವರು ಸಾಮೂಹಿಕ ಊಟದ ವ್ಯವಸ್ಥೆ ಮಾಡಬಾರದು. ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಶಾಮಿಯಾನ, ಮೈಕ್, ಸೌಂಡ್ ಸಿಸ್ಟಮ್ ಸರಬರಾಜು ಮಾಡುವವರು ಯಾವುದೇ ಸೇವೆಗಳನ್ನು ನೀಡುವ ಮುನ್ನ ಶಾಸನಬದ್ಧ ಸಂಸ್ಥೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಈ ಸೂಚನೆ ಉಲ್ಲಂಘಿಸಿದರೆ ಸರಬರಾಜುದಾರರ ವಿರುದ್ಧ ಕ್ರಮಕೈಗೊಂಡು ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು. ಯಾವುದೇ ಅಭ್ಯರ್ಥಿ ಶಾಲಾ ಮಕ್ಕಳನ್ನು ಹಾಗೂ ಇತರೇ ಅಪ್ರಾಪ್ತ ಮಕ್ಕಳನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.