ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ನವ' ನಾಯಕನ ಫಲ ಮಗನಿಗೆ ದಕ್ಕೀತೇ?

Lingaraj Badiger
Updated On : 19 Apr 2013, 11:37 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಏ.18
ಚುನಾವಣೆ ಅಂದ್ಮೇಲೆ ಸೋಲು- ಗೆಲವು ಇದ್ದದ್ದೇ. ಆದ್ರೆ ಕಾಂಗ್ರೆಸ್ ಹಿರಿಯ ನಾಯಕ, ಗುಲ್ಬರ್ಗ ಸಂಸದ, ಸದ್ಯ ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ- ಉದ್ಯೋಗ ಸಚಿವರಾಗಿರುವ ಮಲ್ಲಿಕಾರ್ಜುನ ಖರ್ಗೆ ಪಾಲಿಗೆ ಚುನಾವಣೆ ಅಂದ್ರೆ ಬರೀ ಗೆಲವು..
ಚುನಾವಣೆ ಯಾವುದೇ ಆಗರ್ಲಿ, ಅದು ಅಸೆಂಬ್ಲಿ ಚುನಾವಣೆಯಾಗಿರಬಹುದು, ಪಾರ್ಲಿಮೆಂಟ್ ಚುನಾವಣೆಯೂ ಆಗಿರಬಹುದು, ತಮ್ಮ ಸುದೀರ್ಘ 4 ದಶಕಗಳ ರಾಜಕೀಯ ಬದುಕಲ್ಲಿ ಖರ್ಗೆ ಇದುವರೆಗೂ ಎದುರಿಸಿರುವ(ಅಸೆಂಬ್ಲಿ- 9, ಪಾರ್ಲಿಮೆಂಟ್- 1) ಹತ್ತೂ ಚುನಾವಣೆಗಳಲ್ಲಿ ನಿರಂತರ ಗೆಲವು ಸಾಧಿಸಿದವರು.
ನವ ಇತಿಹಾಸ: ಈ ಹಿರಿಯ ನಾಯಕ ತಾವು ಗುರುಮಠಕಲ್‌ನಿಂದ ಸ್ಪರ್ಧಿಸಿದ್ದ ಚೊಚ್ಚಲ ಚುನಾವಣೆ(1972)ಯಿಂದ ಆರಂಭಿಸಿ ಇಲ್ಲಿಯವರೆಗೂ ನಿರಂತರ ಗೆಲ್ಲುತ್ತಲೇ ಬಂದವರು. ಎಸ್‌ಸಿ ಮೀಸಲು ಕ್ಷೇತ್ರ ಗುರುಮಠಕಲ್‌ನಿಂದ(ಸದ್ಯ ಯಾದಗಿರಿ ಜಿಲ್ಲೆಯ ಭಾಗ) ಸತತ 8 ಬಾರಿ ಗೆದ್ದು ಶಾಸಕರಾಗಿದ್ದ ಖರ್ಗೆ ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಚಿತ್ತಾಪುರ ಮೀಸಲು ಕ್ಷೇತ್ರಕ್ಕೆ ವಲಸೆ ಬಂದರು.
2008ರ ಅಸೆಂಬ್ಲಿ ಚುನಾವಣೆಯಲ್ಲಿ ಚಿತ್ತಾಪುರದಿಂದಲೂ ಗೆದ್ದು ಸತತ 9 ಬಾರಿ ಅಸೆಂಬ್ಲಿ ಅಂಗಳದಲ್ಲಿ ಗೆದ್ದ ನಾಯಕರಾಗಿ ಹೊರಹೊಮ್ಮಿದರು. ಒಂದೇ ಪಕ್ಷ(ಕಾಂಗ್ರೆಸ್)ದಿಂದ ಸತತ 9 ಬಾರಿ(ಗುರುಮಠಕಲ್- 8, ಚಿತ್ತಾಪುರ- 1) ಗೆದ್ದು ತಮಗರಿವಿಲ್ಲದಂತೆಯೇ ರಾಜ್ಯದ ರಾಜಕೀಯದಲ್ಲೇ ನವ ಇತಿಹಾಸ ಬರೆದರು.
1972 ಚೊಚ್ಚಲ ಚುನಾವಣೆ: 2009ರಲ್ಲಿ ನಡೆದ ಲೋಕಸಭೆ ಚುನಾವಣೆ ಅಖಾಡಕ್ಕೆ ಕಾಂಗ್ರೆಸ್ ಗುಲ್ಬರ್ಗದಿಂದ ಇವರನ್ನೇ ಕಣಕ್ಕಿಳಿಸಿತು. ಎಂಪಿ ಚುನಾವಣೆ ಮೊದಲ ಯತ್ನದಲ್ಲಿಯೂ ವಿಜಯಲಕ್ಷ್ಮೀ ಒಲಿದಿದ್ದು ಖರ್ಗೆಯವರಿಗೆ ಎಂಬುದು ವಿಶೇಷ. ಹೀಗಾಗಿ ಅಸೆಂಬ್ಲಿ- ಲೋಕಸಭೆ ಸೇರಿದಂತೆ 10 ಚುನಾವಣೆ ಎದುರಿಸಿ ಎಲ್ಲದರಲ್ಲೂ ಗೆಲ್ಲುವ ಕುದುರೆಯಾಗಿಯೇ ಹೊರಹೊಮ್ಮಿದವರು ಖರ್ಗೆ. ಇಂತಹ ವಿಲಕ್ಷಣ ಬೆಳವಣಿಗೆಗೆ ಹೈ-ಕ ನೆಲದ ಗುಲ್ಬರ್ಗ ಜಿಲ್ಲೆ ಹೊರತುಪಡಿಸಿದರೆ ರಾಜ್ಯದ ಯಾವ ಜಿಲ್ಲೆಯೂ ಸಾಕ್ಷಿಯಾಗಿಲ್ಲ.
ಎಂಎಸ್ಕೆ ಮಿಲ್ ನೌಕರರಾಗಿ ವಕೀಲರಾಗಿದ್ದ ಖರ್ಗೆಯವರಲ್ಲಿನ ನಾಯಕತ್ವದ ಗುಣದಿಂದಾಗಿ ಕಾಂಗ್ರೆಸ್ ಇವರನ್ನು ಗುರುಮಠಕಲ್ ಅಸೆಂಬ್ಲಿಗೆ 1972ರಲ್ಲಿ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿತು. ಸಿಕ್ಕ ಅವಕಾಶವನ್ನು ಸದ್ವಿನಿಯೋಗಿಸಿಕೊಂಡ ಖರ್ಗೆ ಮೊದಲ ಪ್ರಯತ್ನದಲ್ಲೇ ಗೆದ್ದು ತಮ್ಮಲ್ಲಿ ಹುದುಗಿರುವ ರಾಜಕೀಯ ಜಾಣತನ ಪ್ರದರ್ಶಿಸಿ ಬಿಟ್ಟರು.
ಮುಖ್ಯಮಂತ್ರಿ ಹುದ್ದೆ ಕನಸು: ಅಜಾತಶತ್ರು ಖರ್ಗೆ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಪ್ರಮುಖರು. ತಮ್ಮ ಅನುಭವ, ಅರ್ಹತೆ ಹಿನ್ನೆಲೆಯಲ್ಲಿ ಸಿಎಂ ಹುದ್ದೆ ರೇಸ್‌ನಲ್ಲಿ ನಿಂತವರು. ಆದರೆ ಎಂದಿಗೂ ತಮ್ಮ ಸಿಎಂ ಹುದ್ದೆ ಆಸೆಯನ್ನು ಬಹಿರಂಗವಾಗಿ ಹೇಳಿ ಚರ್ಚೆಗೆ ಗ್ರಾಸವಾದರಲ್ಲ. ಹೈಕಮಾಂಡ್ ಇದೆ, ಯಾರಿಗೆ ಯಾವ ಸಂದರ್ಭದಲ್ಲಿ ಏನು ಜವಾಬ್ದಾರಿ ನೀಡಬೇಕೋ ನೀಡುತ್ತಾರೆಂದು ಹೇಳುತ್ತಲೇ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡವರು.
ಪುತ್ರ ಪ್ರಿಯಾಂಕ್ ಚಿತ್ತಾಪುರ(ಮೀ)ದಿಂದ ಸ್ಪರ್ಧೆ: ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಇದೀಗ 2013ರ ಮತ ಸಮರದಲ್ಲಿ ಚಿತ್ತಾಪುರ(ಮೀ) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಎಲ್ಲರದ್ದು ಅದೃಷ್ಟ ಒಂದೇ ಇರೋದಿಲ್ಲವಲ್ಲ, ತಂದೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ ಮೊದಲ ಚುನಾವಣೆಯಿಂದ ಆರಂಭವಾಗಿ ಇಲ್ಲಿಯವರೆಗೂ ಗೆಲ್ಲುತ್ತಲೇ ಸಾಗಿ ದಾಖಲೆ ಬರೆದರೆ ಪ್ರಿಯಾಂಕ್ ಖರ್ಗೆ ತಾವು ಎದುರಿಸಿದ ಚೊಚ್ಚಲ ಚುನಾವಣೆಯಲ್ಲೇ ಸೋಲಿನ ಕಹಿ ಉಂಡವರು.
ಖರ್ಗೆ ಸಂಸದರಾದ ನಂತರ ಚಿತ್ತಾಪುರ ಅಸೆಂಬ್ಲಿಗೆ 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪ್ರಿಯಾಂಕ್ ಮೊದಲ ಬಾರಿಗೆ ಸ್ಪರ್ಧಿಸಿ ಸೋಲುಂಡವರು. ಮರಳಿ ಯತ್ನವ ಮಾಡು ಎಂಬಂತೆ ಪ್ರಿಯಾಂಕ್ ಖರ್ಗೆ ಈ ಬಾರಿ ಮತ್ತೆ ಚಿತ್ತಾಪುರದಿಂದಲೇ ತಮ್ಮ ಅದೃಷ್ಟ ಪರೀಕ್ಷೆಗೊಡ್ಡಿದ್ದಾರೆ.
 -ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement