ಮಾದರಿ ಕ್ಷೇತ್ರ ಮಾಡುವ ಗುರಿ: ಮಟ್ಟಣ್ಣವರ್
ಗುರುಮಠಕಲ್: ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಗುರುಮಠಕಲ್ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡುವೆ ಎಂದು ಬಿಜೆಪಿ ಅಭ್ಯರ್ಥಿ ಗಿರೀಶ್ ಮಟ್ಟಣ್ಣವರ್ ಹೇಳಿದರು.
ಕ್ಷೇತ್ರ ವ್ಯಾಪ್ತಿಯ ಸೈದಾಪುರ, ಕಡೇಚೂರ, ಬೊಮ್ಮರಾಲದೊಡ್ಡಿ, ಮಾವಿನಹಳ್ಳಿ, ಕಣೇಕಲ್, ಕಿಲ್ಲನಕೇರಾ, ಬಳಿಚಕ್ರ, ಯಲ್ಹೇರಿ, ಗಿಡ್ಡಬದ್ದಿ ತಾಂಡಾ, ಬಾಚವಾರ್, ಮೊಟ್ನಹಳ್ಳಿ, ಆಶನಾಳ, ಗಾಜರಕೋಟ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು.
ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಅಭ್ಯರ್ಥಿಗಳು ಸೋಲಿನ ಭೀತಿಯಲ್ಲಿ ಹತಾಶೆಯಿಂದ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕಳೆದ 45 ವರ್ಷಗಳಿಂದ ಆಳ್ವಿಕೆ ಮಾಡಿದ ಘಟಾನುಘಟಿ ನಾಯಕರು ಮಾಡದ ಕೆಲಸವನ್ನು 5 ವರ್ಷಗಳಲ್ಲಿ ಮಾಡುತ್ತೇನೆಂದು ಭರವಸೆ ನೀಡಿದರು.
ಕಾಂಗ್ರೆಸ್ ಹಿಂದುಳಿದ ವರ್ಗದವರನ್ನು ಕೇವಲ ವೋಟ್ ಬ್ಯಾಂಕ್ ಎಂದು ತಿಳಿದುಕೊಂಡಿದೆ. ಅವರ ಅಭಿವೃದ್ಧಿಗಾಗಿ ಯಾವುದೇ ಯೋಜನೆಗಳನ್ನು ಕೈಗೊಂಡಿಲ್ಲ. ರಾಜ್ಯದ ಬಿಜೆಪಿ ಸರ್ಕಾರ ಸಂವಿಧಾನದ ಆಶಯದಂತೆ ಎಲ್ಲಾ ವರ್ಗಗಳಿಗೂ ಸಮಾನ ಪ್ರಾತಿನಿಧ್ಯ ನೀಡಿದೆ. ಬಿಜೆಪಿ ಸರ್ಕಾರ ಜನರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮಗು ತಾಯಿಯ ಗರ್ಭದಲ್ಲಿ ಇರುವಾಗಿನಿಂದ ಪ್ರಾರಂಭವಾಗಿ ವೃದ್ಧರಾಗುವವರಗೆ ಹಾಗೂ ಎಲ್ಲಾ ವಯೋವಾನದವರಿಗಾಗಿ ಉಪಯೋಗವಾಗುವ ಜನಪ್ರಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೋಟ್ನಳ್ಳಿ ಗ್ರಾಮದ ಶಂಕರಗೌಡ ಪೊಲೀಸ್ ಪಾಟೀಲ್, ಸುಭಾಶ್ಚಂದ್ರ ನಾಟೇಕಾರ್, ಹಳೆಪ್ಪ ನಾಟೇಕಾರ್, ಶಿವರಾಯ ಬೊಗಲಮಡಿ, ರಾಮಣ್ಣ, ಶರಣಪ್ಪ ಶಹಾಪುರ, ಸಿದ್ರಾಮ್ ಚಿಂತಕುಂಟಾ, ಸಿದ್ರಾಮ ಗಟ್ಲಾ ಸೇರಿದಂತೆ ಅನೇಕರು ಬಿಜೆಪಿಗೆ ಸೇರ್ಪಡೆಯಾದರು.