ಯಾರನ್ನು ಕಾಡಲಿದ್ದಾರೆ ಕಾಡ್ಲೂರ?
-ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ, ಯಾದಗಿರಿ, ಏ. 18
ಅಳೆದೂ ತೂಗಿ ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ಎ.ಸಿ. ಕಾಡ್ಲೂರ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಅಲ್ಪಸಂಖ್ಯಾತರ ಮತ ಹೆಚ್ಚಿರುವ ಕ್ಷೇತ್ರದಲ್ಲಿ ಆ ಸಮುದಾಯದವರಿಗೆ ಟಿಕೆಟ್ ದೊರೆತಿರುವುದು ಇತರ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಕಾಂಗ್ರೆಸ್ ಹಾಗೂ ಕೆಜೆಪಿಗೆ ಕಾಡ್ಲೂರ ಕಾಡುವುದಂತೂ ನಿಶ್ಚಿತ ಎನ್ನಲಾಗುತ್ತಿದೆ.
ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಪಡೆಯಲು ಇಬ್ಬರು ಮುಖಂಡರು ಪೈಪೋಟಿ ನಡೆಸಿದ್ದರು. ಕಳೆದ ಬಾರಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಶ್ರೀನಿವಾಸರೆಡ್ಡಿ ಚೆನ್ನೂರ ಹಾಗೂ 2004ರಲ್ಲಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಎ.ಸಿ. ಕಾಡ್ಲೂರ ಮಧ್ಯೆ ಟಿಕೆಟ್‌ಗಾಗಿ ಕಸರತ್ತು ನಡೆದಿತ್ತು. ಅಲ್ಲದೇ ಇತರ ಪಕ್ಷಗಳಿಂದ ಟಿಕೆಟ್ ದೊರೆಯದೇ ಯಾರಾದರೂ ಪ್ರಮುಖ ಮುಖಂಡರು ಬರುತ್ತಾರೋ ಎಂಬ ಕಾದುನೋಡುವ ತಂತ್ರಕ್ಕೂ ಜೆಡಿಎಸ್ ವರಿಷ್ಠರು ಕಾದು ಕುಳಿತಿದ್ದರು. ಆದರೆ ಪ್ರಮುಖ ಆಕಾಂಕ್ಷಿಗಳು ಬಾರದೇ ಇರುವುದರಿಂದ ಪಕ್ಷದ ಇಬ್ಬರು ಮಖಂಡರ ಪೈಕಿ ಕಾಡ್ಲೂರಗೆ ಕೊನೆ ಕ್ಷಣದಲ್ಲಿ ಟಿಕೆಟ್ ದೊರೆತಿದೆ. ಅಲ್ಪಸಂಖ್ಯಾತರ ಮತದ ಮೇಲೆ ಕಣ್ಣಿಟ್ಟುಕೊಂಡು ಕಾಡ್ಲೂರಗೆ ಟಿಕೆಟ್ ನೀಡಲಾಗಿದ್ದರೂ, ಇದು ಇತರ ಪಕ್ಷಗಳ ಅಭ್ಯರ್ಥಿಗಳ ನಿದ್ದೆಯನ್ನೂ ಕೆಡಿಸಿದೆ.
ಮುಸ್ಲಿಂ ಮತ ನಿರ್ಣಾಯಕ: ಕ್ಷೇತ್ರದಲ್ಲಿ ಸುಮಾರ 2 ಲಕ್ಷ 25 ಸಾವಿರದಷ್ಟು ಮತದಾರರಿದ್ದು, ಅವುಗಳ ಪೈಕಿ 35 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಅದರಲ್ಲೂ ಯಾದಗಿರಿ ನಗರ ಪ್ರದೇಶದಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದಾರೆ. ಅಲ್ಪಸಂಖ್ಯಾತರೆಲ್ಲರೂ ಒಬ್ಬರನ್ನೇ ಬೆಂಬಲಿಸುತ್ತಾರೆ ಎಂದು ಹೇಳಲೂ ಸಾಧ್ಯವಿಲ್ಲ. ಆದರೂ ಅವರ ಮತಗಳು ಕ್ಷೇತ್ರದಲ್ಲಿ ನಿರ್ಣಾಯಕವಾಗಲಿದೆ. ಒಂದು ವೇಳೆ ತಮ್ಮ ಸಮುದಾಯದ ವ್ಯಕ್ತಿಯೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಒನ್ ಸೈಡ್ ಮತ ಚಲಾವಣೆಯಾದರೆ ಅದು ಇತರ ಪಕ್ಷಗಳ ಅಭ್ಯರ್ಥಿಗಳ ನೆಮ್ಮದಿ ಕೆಡಿಸುವುದು ನಿಶ್ಚಿತ. ಇದೇ ವೇಳೆ ಎ.ಸಿ. ಕಾಡ್ಲೂರ ಅವರೂ ತಮ್ಮ ಸಮುದಾಯದ ಮತ ವಿಭಜನೆ ಆಗದಂತೆ ನೋಡಿಕೊಂಡರೆ ತಮ್ಮ ಗೆಲುವು ನಿರಾಯಾಸ ಎಂಬ ಗುಂಗಿನಲ್ಲಿದ್ದಾರೆ.
ಕಾಂಗ್ರೆಸ್‌ಗೆ ಕಾಟ: ಯಾದಗಿರಿ ಕ್ಷೇತ್ರ ಸೇರಿದಂತೆ ಜಿಲ್ಲೆಯೇ ಮೂಲತಃ ಕಾಂಗ್ರೆಸ್ ಭದ್ರಕೋಟೆ. ಅದರಲ್ಲೂ ಅಲ್ಪಸಂಖ್ಯಾತರು ಕಾಂಗ್ರೆಸ್ ಬೆಂಬಲಿಸುತ್ತಲೇ ಬಂದಿದ್ದಾರೆ. ಆದರೆ ಈ ಹಿಂದಿನ ಚುನಾವಣೆಗಳ ಫಲಿತಾಂಶ ಗಮನಿಸಿದರೆ ಕಾಡ್ಲೂರ ಸ್ಪರ್ಧೆಯಿಂದ ಕಾಂಗ್ರೆಸ್‌ಗೇ ಹೆಚ್ಚು ನಷ್ಟ ಎನ್ನುವುದು ಗೊತ್ತಾಗುತ್ತದೆ. 2004ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಎ.ಸಿ. ಕಾಡ್ಲೂರ ಸ್ಪರ್ಧಿಸಿ, 21,316 ಮತ ಪಡೆದು ಸೋತಿದ್ದರು.
ಆದರೆ ಇದು ಕಾಂಗ್ರೆಸ್‌ನ ಮಾಲಕರೆಡ್ಡಿ ಅವರ ಸೋಲಿಗೂ ಕಾರಣವಾಯಿತು. ಆಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ವೀರಬಸವಂತರೆಡ್ಡಿ ಮುದ್ನಾಳ ಆಯ್ಕೆಯಾದರು. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಕಾಡ್ಲೂರ ಪಾಲಾಗಿದ್ದರಿಂದಲೇ ಸತತ ಮೂರು ಬಾರಿ ಗೆದ್ದಿದ್ದ ಮಾಲಕರೆಡ್ಡಿ ಆಗ ಸೋಲುವಂತಾಯಿತು. ಆದರೆ 2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಶ್ರೀನಿವಾಸರೆಡ್ಡಿ ಚೆನ್ನೂರ ಸ್ಪರ್ಧಿಸಿದ್ದರಿಂದ ಮತ್ತೆ ಮಾಲಕರೆಡ್ಡಿ ಗೆಲವು ಸಾಧಿಸಿದರು. ಆದ್ದರಿಂದ ಈ ಬಾರಿ ಕಾಡ್ಲೂರ ಸ್ಪರ್ಧೆ ಕಾಂಗ್ರೆಸ್‌ಗೆ ನಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.
ಲಾಭ ನಷ್ಟದ ಲೆಕ್ಕಾಚಾರ: ಚುನಾವಣೆಯಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ತಳ್ಳಿಹಾಕುವಂತಿಲ್ಲ. ಕೆಜೆಪಿಯಿಂದ ಸ್ಪರ್ಧಿಸಿರುವ ಡಾ. ವೀರಬಸವಂತರೆಡ್ಡಿ ಮುದ್ನಾಳ, ಕಾಂಗ್ರೆಸ್‌ನ ಡಾ.ಮಾಲಕರೆಡ್ಡಿ, ಬಿಜೆಪಿಯಿಂದ ಸ್ಪರ್ಧಿಸಿರುವ ಚಂದ್ರಶೇಖರ ಮಾಗನೂರ ಎಲ್ಲರೂ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಿಜೆಪಿಗೆ ಅಲ್ಪಸಂಖ್ಯಾತರ ಮತಗಳು ಹೆಚ್ಚು ಬೀಳುವ ಸಾಧ್ಯತೆ ಕಡಿಮೆ. ಆದರೆ ಕಾಂಗ್ರೆಸ್ ಮತ್ತು ಕೆಜೆಪಿ ಅವರ ಮತಗಳ ಮೇಲೆ ಕಣ್ಣಿಟ್ಟುಕೊಂಡೇ ಸ್ಪರ್ಧೆಗಿಳಿದಿದೆ. ಈಗ ಕಾಡ್ಲೂರ ನಿಂತಿರುವುದರಿಂದ ಮತ ಲೆಕ್ಕಾಚಾರ ಆರಂಭವಾಗಿದೆ. ಕಾಡ್ಲೂರ ಸ್ಪರ್ಧೆಯಿಂದ ನಾವು ಮತ ಕಳೆದುಕೊಂಡರೆ ಎಂದು ಕಾಂಗ್ರೆಸ್ ಚಿಂತಿಸುತ್ತಿದ್ದರೆ, ಕೆಜೆಪಿಗೆ ಇದು ವರದಾನವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಮೂವರ ಜಗಳ ತಮಗೆ ಲಾಭವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಬಿಎಸ್ಸಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಮೌಲಾಲಿ ಅನಪುರ ಹಾಗೂ ಬಿಜೆಪಿಯ ಚಂದ್ರಶೇಖರ ಮಾಗನೂರ ಇದ್ದಾರೆ.
ಒಟ್ಟಿನಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಸಿ. ಕಾಡ್ಲೂರ ಎಲ್ಲಾ ಪಕ್ಷಗಳ ನಿದ್ದೆಗೆಡಿಸಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ರಾಜಕೀಯ ಕಾವು ಏರುವಂತೆ ಮಾಡಿದ್ದಾರೆ. ಇದು ಯಾರಿಗೆ ಲಾಭ, ಯಾರಿಗೆ ನಷ್ಟವಾಗುತ್ತದೆ ಎನ್ನುವುದನ್ನು ಹೇಳುವುದು ಸುಲಭವಲ್ಲ. ಫಲಿತಾಂಶದ ಬಳಿಕವೇ ಯಾರು ಯಾರ ಗೆಲುವಿಗೆ, ಸೋಲಿಗೆ ಕಾರಣರಾಗಿದ್ದಾರೆ ಎನ್ನುವುದು ಗೊತ್ತಾಗಲಿದೆ. ಅಲ್ಲಿಯವರೆಗೆ ಬಾಯ್ಮಾತಿನ ಲೆಕ್ಕಾಚಾರಕ್ಕೇ ಜೋತು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.