ಹಣ ಲೂಟಿ ಮಾಡಿದ್ದೇ ವಲ್ಯಾಪುರೆ ಸಾಧನೆ: ತೇಗಲತಿಪ್ಪಿ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಏ.18
ಕಳೆದ 5 ವರ್ಷಗಳಲ್ಲಿ ಬಿಜೆಪಿ ಶಾಸಕರಾಗಿದ್ದ ಮತ್ತು ಕೆಜೆಪಿ ಅಭ್ಯರ್ಥಿಯಾಗಿರುವ ಸುನೀಲ್ ವಲ್ಯಾಪುರೆ ಅವರು ತಾಲೂಕಿಗೆ ಬಂದ ಅಭಿವೃದ್ಧಿ ಹಣ ಲೂಟಿ ಮಾಡಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದು, ಗಣೇಶ ಉತ್ಸವದಲ್ಲಿ ಮನರಂಜನೆ ಮಾಡಿದ್ದೇ ದೊಡ್ಡ ಸಾಧನೆಯಾಗಿದೆ. ಅಭಿವೃದ್ಧಿ ಮಾತ್ರ ಶೂನ್ಯ ಎಂದು ಜಿಪಂ ಮಾಜಿ ಅಧ್ಯಕ್ಷ ಭೀಮರಾವ ತೇಗಲತಿಪ್ಪಿ ಆರೋಪಿಸಿದರು.
ಪಟ್ಟಣದ ದಲಿತ ಬಡಾವಣೆಯ ಸಿದ್ದರಾಮೇಶ್ವರ ಗುಂಪಾದಲ್ಲಿ ಬುಧವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರು ತಮ್ಮ ಅಧಿಕಾರ ಅವಧಿಯಲ್ಲಿ ತಾಲೂಕಿಗೆ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡದೇ ಕೇವಲ ಮೋಜು ಮಸ್ತಿಯಲ್ಲಿ ಕಾಲಹರಣ ಮಾಡಿದ್ದಾರೆ ಎಂದು ದೂರಿದರು.
ಹಿರಿಯ ಮುಖಂಡ ಕೆ.ಎಂ. ಬಾರಿ, ಬಸವರಾಜ ಮಲಿ, ಅಬ್ದುಲ್ ಬಾಸೀತ್, ಜಗನ್ನಾಥ ಕಟ್ಟಿ, ಕಾಂಗ್ರೆಸ್ ಸಾಧನೆ ಕುರಿತು ಮಾತನಾಡಿದರು. ಪಪಂ ಸದಸ್ಯ ಶಾಮರಾವ, ನರಸಪ್ಪ ಕಿವಣೋರ, ರಾಜರೆಡ್ಡಿ, ವೃತೇಂದ್ರರೆಡ್ಡಿ, ಬಸವಣ್ಣ ಪಾಟೀಲ್ ಇದ್ದರು.
ನಿರೀಕ್ಷೆಯಂತೆ ಅಭಿವೃದ್ಧಿಯಾಗಿಲ್ಲ: ವಿಶ್ವನಾಥ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಏ.18
ಚಿಂಚೋಳಿ ಮೀಸಲು ವಿಧಾನಸಭೆ ಮತಕ್ಷೇತ್ರದಲ್ಲಿ ಜನರ ನಿರೀಕ್ಷೆಯಂತೆ ಅಭಿವೃದ್ಧಿಯಾಗಿಲ್ಲ ಎಂದು ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೇಳಿದರು.
ಚಂದಾಪುರ ನಗರದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಮೊದಲು ಬಿಜೆಪಿ ಗೆಲವು ಸಾಧಿಸಿ ನಂತರ ಕೆಜೆಪಿಗೆ ಸೇರ್ಪಡೆಗೊಂಡಿರುವ ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ತಾಲೂಕಿನಲ್ಲಿ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು.
ಈ ಚುನಾವಣೆಯಲ್ಲಿ ಚಿತ್ತಾಪುರ, ಸೇಡಂ, ಚಿಂಚೋಳಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಭ್ಯರ್ಥಿ ಡಾ. ಉಮೇಶ ಜಾಧವ, ಬಸವರಾಜ ಹೇರೂರ, ಶಿವಶರಣಪ್ಪ ಜಾಪಟ್ಟಿ, ಡಾ. ಪಾಂಡುರಂಗ ಪೂಜಾರಿ, ರೇವಣಸಿದ್ದಪ್ಪ ಮಾಸ್ಟರ್, ಶಿವಕುಮಾರ ಕೊಳ್ಳೂರ, ಚಿತ್ರಶೇಖರ ಪಾಟೀಲ್ ಇದ್ದರು.