ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ಹಿಂದಕ್ಕೆ
ಗುಲ್ಬರ್ಗ: ಜಿಲ್ಲೆಯ ಚಿತ್ತಾಪುರ (ಎಸ್ಸಿ) ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರದಂದು ಇಬ್ಬರು ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಜೇಮಸಿಂಗ್ ಪಾಂಡುರಂಗ- ಪಕ್ಷೇತರ ಹಾಗೂ ಸೀತಾರಾಮ ರಾಠೋಡ ತಂ.ಹೇಮಲಾ ರಾಠೋಡ- ಪಕ್ಷೇತರ.
ಉಳಿದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡಿರುವುದಿಲ್ಲ. ನಾಮಪತ್ರ ಹಿಂದಕ್ಕೆ ಪಡೆಯಲು ಏಪ್ರಿಲ್ 20 ಶನಿವಾರ ಮಧ್ಯಾಹ್ನ 3 ಗಂಟೆಯವರೆಗೆ ಕಾಲಾವಕಾಶವಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಜಿ. ಜಗದೀಶ್ ಅವರು ತಿಳಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆಯ 14 ದೂರು ದಾಖಲು: ಗುಲ್ಬರ್ಗ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಚುನಾವಣೆ ಪ್ರಯುಕ್ತ ಏಪ್ರಿಲ್ 16ರವರೆಗೆ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಒಟ್ಟು 14 ಪ್ರಕರಣಗಳು ದಾಖಲಾಗಿವೆ.
ಈ ಪೈಕಿ ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ ಏಪ್ರಿಲ್ 15ರಂದು ಬಿಜೆಪಿಯಿಂದ ಅನುಮತಿ ಇಲ್ಲದೆ ಮೆರವಣಿಗೆ ನಡೆಸಿರುವ ಬಗ್ಗೆ ಸೇಡಂ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಬಿಜೆಪಿ ಪಕ್ಷದ ವಿರುದ್ಧ ಎಫ್ಐಆರ್ ದೂರು ದಾಖಲಾಗಿದೆ.
ಗುಲ್ಬರ್ಗ ಗ್ರಾಮೀಣ (ಎಸ್ಸಿ) ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ಆರ್(ಕಾಂಗ್ರೆಸ್)ನಿಂದ ಶ್ರೀಚಂದದಲ್ಲಿ ಪಕ್ಷದ ಮುಖಂಡರ ಭಾವಚಿತ್ರ ಹಾಗೂ ಪಕ್ಷದ ಚಿಹ್ನೆ ಹೊಂದಿರುವ ಭಿತ್ತಿಪತ್ರ ಅಂಟಿಸಿದಕ್ಕಾಗಿ ಕರ್ನಾಟಕ ಓಪನ್ ಪ್ಲೇಸೆಸ್ ಆಕ್ಟ್ ಪ್ರೀವೆನ್ಷನ್ ಆಫ್ ಡಿಸ್ಫಿಗರ್ಮೆಂಟ್ ಕಾಯ್ದೆ 1980 ರನ್ವಯ ನರೋಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗುಲ್ಬರ್ಗ ದಕ್ಷಣ ವಿಧಾನಸಭಾ ಮತಕ್ಷೇತ್ರದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಏಪ್ರಿಲ್ 14ರಂದು 17.30 ಲಕ್ಷ ನಗದು ಹಣ ಹೊಂದಿದ ಎಮ್ಎಚ್ 24ಎನ್ 7622 ವಾಹನವನ್ನು ಜಪ್ತಿ ಮಾಡಲಾಗಿದೆ.
ಏಪ್ರಿಲ್ 16ರವರೆಗೆ ವಿಧಾನಸಭಾ ಕ್ಷೇತ್ರವಾರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವಿವರ ಇಂತಿದೆ. ಚಿತ್ತಾಪುರ (ಎಸ್ಸಿ)- 1, ಸೇಡಂ- 4, ಚಿಂಚೋಳಿ (ಎಸ್ಸಿ)- 2, ಗುಲ್ಬರ್ಗ ಗ್ರಾಮೀಣ (ಎಸ್ಸಿ)- 1, ಗುಲ್ಬರ್ಗ ದಕ್ಷಿಣ- 2, ಗುಲ್ಬರ್ಗ ಉತ್ತರ- 4.