ಈ ಬಾರಿ ಬಿಜೆಪಿ ಜಯಭೇರಿ: ಮಟ್ಟಣ್ಣವರ ವಿಶ್ವಾಸ
ಗುರುಮಠಕಲ್: ಕ್ಷೇತ್ರದಲ್ಲಿ ಬಿಜೆಗೆಗೆ ಈ ಸಲ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಪಕ್ಷ ಜಯಭೇರಿ ಬಾರಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ ಗಿರೀಶ್ ಮಟ್ಟಣ್ಣವರ್ ವಿಶ್ವಾಸ ವ್ಯಕ್ತಪಡಿಸಿದರು. ಗುರುಮಠಕಲ್ ಮತಕ್ಷೇತ್ರದ ಬಳಿಚಕ್ರ, ಬಳಿಚಕ್ರ ತಾಂಡಾ, ನಾಗಲಾಪುರ, ಗೌಡಗೇರಾ, ಚಿಂತಕುಂಟಾ, ಕೊಟಿಗೇರಾ ಗ್ರಾಮಗಳಲ್ಲಿ ಮಾತಯಾಚನೆ ಮಾಡಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಆ ಕಾರ್ಯಕ್ರಮಗಳೇ ತಮ್ಮ ಗೆಲವಿಗೆ ಸಹಾಕಾರಿ ಎಂದು ಅಭಿಪ್ರಾಯಪಟ್ಟರು. ವಿರೋಧ ಪಕ್ಷಗಳು ಸ್ವತಂತ್ರ ಬಂದಾಗಿನಿಂದ ಮಾಡದಿರುವ ಅಭಿವೃದ್ಧಿ ಕೆಲಸಗಳನ್ನು ಬಿಜೆಪಿ ಸರ್ಕಾರ ಕೇವಲ 5 ವರ್ಷಗಳಲ್ಲಿ ಮಾಡಿ ತೋರಿಸಿದೆ. ಕ್ಷೇತ್ರದಿಂದ ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ನಗರಗಳಿಗೆ ಗುಳೆ ಹೋದ ಕಾರ್ಮಿಕರ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಅವರ ಕೆಲಸ ಮಾಡುವ ಸ್ಥಳದಲ್ಲಿ ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಸೌಲಭ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂದೆಯೂ ಈ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವೆ. ಅದಕ್ಕಾಗಿ ಈ ಬಾರಿ ಒಮ್ಮೆ ಅವಕಾಶ ಮಾಡಿಕೊಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ತೊರೆದು ಅನೇಕರು ಬಿಜೆಪಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಹಳ್ಳೆಪ್ಪ ಕಿಲ್ಲನಕೇರಾ, ಸಾಯಿಬಣ್ಣ ಬಸಂತಪುರ, ದೇವದಾಸ್ ಕೆ, ಹಣಮಂತ ವಡವಟ್, ರಾಜು ದೊರೆ, ಬಸವರಾಜ್ ಸಂಜನೋಳ್, ವೀರಯ್ಯಸ್ವಾಮಿ ಇತರರು ಇದ್ದರು.