ಚುನಾವಣಾ ಕಾವು, ವಾಹನ ತಪಾಸಣೆ ಜೋರು
ಕೆಂಭಾವಿ: ಈ ಬಾರಿಯ ವಿಧಾನಸಭೆಯ ಚುನಾವಣೆಯ ಕಾವು ಏರುತ್ತಿರುವಂತೆಯೇ ಅಭ್ಯರ್ಥಿಗಳ ಎದೆ ಬಡಿತವೂ ಏರತೊಡಗಿದೆ. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಆದೇಶದಂತೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಹದ್ದಿನ ಕಣ್ಣು ಎಲ್ಲೆಡೆ ವ್ಯಾಪಿಸಿದೆ.
ಸುಮಾರು ಹತ್ತು ಕಿಮೀಗೆ ಒಂದರಂತೆ ಚೆಕ್ಪೋಸ್ಟ್ಗಳನ್ನು ತೆರೆಯುವ ಮೂಲಕ ಓಡಾಡುವ ಎಲ್ಲ ವಾಹನದ ಮೇಲೆ ನಿಗಾ ಇಡಲಾಗಿದೆ. ಇದು ಅಭ್ಯರ್ಥಿಗಳ ನಿದ್ದೆಗೆಡಿಸಿದೆ. ಕೇವಲ ಖಾಸಗಿ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಪೊಲೀಸ್ ಇಲಾಖೆ ಹಾಗೂ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಸರ್ಕಾರಿ ವಾಹನಗಳಾದ ಬಸ್ಸು, ಸರ್ಕಾರಿ ಜೀಪುಗಳಲ್ಲದೆ ರೈಲುಗಳನ್ನು ಸಹ ತಪಾಸಣೆ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಖಾಸಗಿ ವಾಹನಗಳಲ್ಲಿ ಮದ್ಯ, ಹಣ, ಬಟ್ಟೆ ಮುಂತಾದ ವಸ್ತುಗಳನ್ನು ಸಾಗಾಣೆ ಮಾಡಿ ಮತದಾರರಿಗೆ ಆಮಿಷ ಒಡ್ಡಬಹುದು ಎಂಬ ಕಾರಣಕ್ಕಾಗಿ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ. ಆದರೆ ಸರ್ಕಾರಿ ವಾಹನಗಳನ್ನು ಯಾಕೆ ತಪಾಸಣೆ ಮಾಡುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಎಲ್ಲಾ ಕಡೆ ಚೆಕ್ಪೋಸ್ಟ್ ನಿರ್ಮಿಸಲಾಗಿದ್ದು, ಹೋಗಿ ಬರುವ ಖಾಸಗಿ ವಾಹನಗಳ ತಪಾಸಣೆ ದಿನದ 24 ಗಂಟೆಗಳ ಕಾಲ ನಡೆಯುತ್ತಿದೆ. ಆದ್ದರಿಂದ ಸಾರ್ವಜನಿಕರೂ ನಗದು, ಆಭರಣ ಒಯ್ಯಲು ಅಂಜುವಂತಾಗಿದೆ. ಏನೇ ಅದರೂ ಆಯೋಗದ ಈ ದಿಟ್ಟ ಕ್ರಮದಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೆಂಡ, ಹಣದ ಹೊಳೆ ಹರಿಯುವುದಕ್ಕೆ ಸ್ವಲ್ಪ ಬ್ರೇಕ್ ಬಿದ್ದಂತಾಗಿದೆ. ಆದರೂ ಭದ್ರತಾ ಸಿಬ್ಬಂದಿ ಕಣ್ಣನ್ನು ತಪ್ಪಿಸಿ ಅಕ್ರಮ ನಡೆಯುತ್ತಿರುವುದು ನಡೆದೇ ಇದೆ.