ರಂಗೋಲಿ ಕೆಳಗೆ ನುಸುಳುತ್ತಿರುವ ಅಭ್ಯರ್ಥಿಗಳು!
ನಾರಾಯಣ ಹೆಗಡೆ
ಕ.ಪ್ರ. ವಾರ್ತೆ ಯಾದಗಿರಿ ಏ.19
ಚುನಾವಣಾ ಆಯೋಗ ಈ ಬಾರಿಯ ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ಕಟ್ಟುನಿಟ್ಟು ಮಾಡಿದ್ದರೂ ಅಭ್ಯರ್ಥಿಗಳು ರಂಗೋಲಿ ಕೆಳಗೇ ನುಗ್ಗುತ್ತಿದ್ದಾರೆ. ಅದಕ್ಕಾಗಿ ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರನ್ನು ತಮ್ಮ ಮತ್ತು ಮತದಾರರ ನಡುವಿನ ಕೊಂಡಿಯಾಗಿ ಬಳಸಿಕೊಳ್ಳುತ್ತಿರುವ ಆರೋಪ ಕೇಳಿಬರುತ್ತಿದೆ. ಚುನಾವಣಾ ಆಯೋಗ ಈ ಬಾರಿ ಈ ಹಿಂದೆ ಕಾರ್ಯನಿರ್ವಹಿಸಿದ ಹಿರಿಯ ಅಧಿಕಾರಿಗಳ ಜಾಗಕ್ಕೆ ಹೊಸಬರನ್ನು ಕೂರಿಸಿದೆ. ತಾಲೂಕು ಮಟ್ಟದಲ್ಲಿ ಅನೇಕ ವರ್ಷಗಳಿಂದ ಬೇರೂರಿದ್ದ ಅಧಿಕಾರಿಗಳನ್ನು ಅದಲು ಬದಲು ಮಾಡಿದೆ. ಎಲ್ಲೆಡೆ ಚೆಕ್ ಪೋಸ್ಟ್ ನಿರ್ಮಿಸಿ ಮತದಾರರಿಗೆ ಆಮಿಷವೊಡ್ಡುವ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಆಯೋಗಕ್ಕೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರಿಗೆ ಹೆಚ್ಚು ಪರಿಚಯವಿರುವವರೆಂದರೆ ಅಂಗನವಾಡಿ ಕಾರ್ಯಕರ್ತೆಯರು, ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವವರು, ಅಡುಗೆ ಸಹಾಯಕರು, ಆಶಾ ಕಾರ್ಯಕರ್ತೆಯರು. ಹೀಗೆ ತಳ ಮಟ್ಟದಲ್ಲಿ ಕೆಲಸ ಮಾಡುತ್ತಿರುವವರು ಸ್ಥಳೀಯ ಮಟ್ಟದ ಮುಖಂಡರ ಪ್ರಭಾವದಿಂದಲೇ ನೇಮಕಗೊಂಡ ನೌಕರರಾಗಿದ್ದಾರೆ. ಆದ್ದರಿಂದ ಈಗ ಚುನಾವಣೆಯಲ್ಲಿ ಅವರ ಋಣ ತೀರಿಸಲು ಒಳ್ಳೆಯ ಅವಕಾಶವೂ ಒದಗಿಬಂದಿದೆ. ಅದಕ್ಕಾಗಿ ಈಗಾಗಲೇ ಇಂಥವರು ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಮನೆಗೆ ತೆರಳಿ, ಸ್ತ್ರೀಶಕ್ತಿ ಸಂಘಗಳು ಅವುಗಳ ಸದಸ್ಯೆಯರೊಂದಿಗೆ ಚರ್ಚಿಸಿ ತಾವು ಹೇಳಿದ ಅಭ್ಯರ್ಥಿಗೆ ಮತ ಹಾಕುವಂತೆಓಲೈಸುತ್ತಿದ್ದಾರೆ.
ನಿಷ್ಠೆ ಬದಲಾಗದು: ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಕಣ್ಣು ಈಗ ಮಹಿಳಾ ಮತದಾರರ ಮೇಲಿದೆ. ಮಹಿಳಾ ಮತದಾರರು ಒಮ್ಮೆ ಮಾತುಕೊಟ್ಟರೆ ಅವರ ನಿಷ್ಠೆ ಬದಲಾಗದು ಎಂಬ ಸತ್ಯ ಅವರಿಗೆ ಅರಿವಾಗಿದೆ. ಅಭ್ಯರ್ಥಿಗಳಿಗೆ ಈ ರೀತಿಯ ತಂತ್ರ, ಚುನಾವಣಾ ಆಯೋಗದ ಕಣ್ಣು ತಪ್ಪಿಸಲು ಸದ್ಯಕ್ಕಿರುವ ನೇರ ದಾರಿಯಾಗಿದೆ. ಆದರೆ ಈ ಉಪಾಯ ಹಿಂದೆ ಶಾಸಕರಾಗಿದ್ದವರಿಗೆ ಮಾತ್ರ ಎಂಬಂತಾಗಿದೆ. ಉಳಿದ ಅಭ್ಯರ್ಥಿಗಳಿಗೆ ಇದು ನುಂಗಲಾರದ ತುತ್ತಾಗಿದ್ದು, ಈ ರೀತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸುವುದೊಂದೇ ಅವರಿಗೆ ಉಳಿದಿರುವ ದಾರಿ. ಕಾರ್ಯಕರ್ತೆಯರನ್ನು ಹೀಗೆ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವವರ ಮೇಲೆ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಚಂದ್ರಶೇಖರ ದಾಸನಕೇರಿ ಆಗ್ರಹಿಸಿದ್ದಾರೆ.
ಹಣ ಒಯ್ಯುವುದೇ ಕಷ್ಟ: ಚುನಾವಣಾ ಆಯೋಗವು ಎಲ್ಲ ಕಡೆಗಳಲ್ಲಿ ತಪಾಸಣೆ ಮಾಡುತ್ತಿರುವುದರಿಂದ, ಎಂಸಿಸಿ ತಂಡದ ಅಧಿಕಾರಿಗಳು, ಪೊಲೀಸ್ ವಾಹನಗಳು ದಿನದ 24 ಗಂಟೆಗಳ ಕಾಲವೂ ಗಸ್ತು ತಿರುಗುತ್ತಿರುವುದರಿಂದ ನಗದು ಹಾಗೂ ಇನ್ನಿತರ ಸಾಮಗ್ರಿಗಳನ್ನು ಮತದಾರರ ಬಳಿಗೆ ಒಯ್ಯುವುದೇ ಕಷ್ಟವಾಗುತ್ತಿದೆ. ಡಿಸಿ, ಎಸ್ಪಿ ಸೇರಿದಂತೆ ಎಲ್ಲಾ ಅಧಿಕಾರಿಗಳು, ಸರ್ಕಾರಿ ವಾಹನವನ್ನೂ ಬಿಡದೇ ತಪಾಸಣೆ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದ್ದರಿಂದ ಅಭ್ಯರ್ಥಿಗಳಿಗೆ ಸದ್ಯ ಗ್ರಾಮೀಣ ಮಟ್ಟದಲ್ಲಿ ಚಿರಪರಿಚಿತರಾಗಿರುವ ಕಾರ್ಯಕರ್ತೆಯರ ಅಗತ್ಯ ಹೆಚ್ಚಾಗಿದೆ. ಅವರ ಮೂಲಕವೇ ಈಗ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎನ್ನಲಾಗುತ್ತಿದೆ.
ಈ ಕುರಿತು ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಅವರಲ್ಲಿ ಕೇಳಿದಾಗ, “¾ÚáÛÈÚâ¥æÞ ರೀತಿಯ ಅಕ್ರಮ ನಡೆಯದಂತೆ ಜಿಲ್ಲಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕರ್ತೆಯರು ಪ್ರಚಾರ ನಡೆಸುತ್ತಿರುವ ವಿಷಯ ಗಮನಕ್ಕೆ ಬಂದಿರಲಿಲ್ಲ. ಆದರೆ ಇದನ್ನು ಗಂಭೀರವಾಗಿ ®ÚÂVÚ{ÑÚÅÛVÚßÈÚâ¥Úß’ ಎಂದು ತಿಳಿಸಿದರು.