24 ಗಂಟೆಯೊಳಗೆ ನಮೂನೆ 12 ಸಲ್ಲಿಸಿ
ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5 ರಂದು ನಡೆಯುವ ಚುನಾವಣೆಯಲ್ಲಿ ನೇಮಕಗೊಂಡ ಎಲ್ಲ ಚುನಾವಣಾ ಸಿಬ್ಬಂದಿ ವಿಶೇಷವಾಗಿ ವಿವಿಧ ಕಾಲೇಜು ಮತ್ತು ಪಪೂ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಕಡ್ಡಾಯ ಮತದಾನ ಮಾಡಲು ಅನುವಾಗುವಂತೆ ನಮೂನೆ-12ನ್ನು 24 ಗಂಟೆಯೊಳಗಾಗಿ ಜಿಪಂ ಉಪಕಾರ್ಯದರ್ಶಿ ವಸಂತ ಕುಲಕರ್ಣಿ ಅಥವಾ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಭರ್ತಿ ಮಾಡಿ ಸಲ್ಲಿಸಬೇಕೆಂದು ಜಿಲ್ಲಾಡಳಿತವು ಸೂಚಿಸಿದೆ. ಯುವಕರು, ವಿದ್ಯಾವಂತರು ಕಡ್ಡಾಯವಾಗಿ ಮತದಾನ ಮಾಡುವಂತೆ ಜಿಲ್ಲಾಡಳಿತವು ಹಲವಾರು ಕಾರ್ಯಕ್ರಮಗಳನ್ನು ಹಾಗೂ ಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾವಂತರಾದ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಇದನ್ನು ಮನದಟ್ಟು ಮಾಡಿಕೊಂಡು ಯುವಕರಿಗೆ ಮತ್ತು ವಿದ್ಯಾವಂತರಿಗೆ ಮಾದರಿಯಾಗಬೇಕು ಎಂದು ಜಿಲ್ಲಾಡಳಿತ ಕೋರಿದೆ.
ಬಿಎಸ್ವೈ ಗುಲ್ಬರ್ಗಕ್ಕೆ
ಗುಲ್ಬರ್ಗ: ಕೆಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಏ.21 ರಿಂದ ಗುಲ್ಬರ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಏ.21 ರಿಂದ ಸಂಜೆ ಸಿಂದಗಿಯಿಂದ ಚಿಂಚೋಳಿಗೆ 6.15ಕ್ಕೆ ಆಗಮಿಸಿ ಚಿಂಚೋಳಿ ಮತಕ್ಷೇತ್ರದ ಚಿಂಚೋಳಿ ನಗರದಲ್ಲಿ ಹಾಗೂ ಸೇಡಂ ಮತಕ್ಷೇತ್ರದ ಸುಲೇಪೇಟ್ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ರಾತ್ರಿ ಬೀದರ್ಗೆ ಪ್ರಯಾಣ ಮಾಡಿ ವಾಸ್ತವ್ಯ ಮಾಡಲಿದ್ದಾರೆ.