ಅಬಕಾರಿ ದಾಳಿ, ಮೂವರ ಬಂಧನ
ಶಹಾಪುರ: ತಾಲೂಕಿನ ವಿವಿಧೆಡೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿ, ಸುಮಾರು 6 ಸಾವಿರ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಇಲಾಖೆ ಜಂಟಿ ಆಯುಕ್ತ ಎಸ್.ಕೆ. ಕುಮಾರ ಆದೇಶದಂತೆ ಶಹಾಪುರ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇನಾಮದಾರ ನೇತೃತ್ವದಲ್ಲಿ ತಾಲೂಕಿನ ಬಿರನೂರ ಗ್ರಾಮದ ನಿಂಗಯ್ಯ ಕರಣಗೌಡ ಎಂಬವರ ಅಂಗಡಿ ಮೇಲೆ ದಾಳಿ ಮಾಡಿ 45 ಬಿಯರ್ ಬಾಟಲ್ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೈದಾಪುರ ಗ್ರಾಮದ ಪಾನಬೀಡಾ ಅಂಗಡಿ ಮೇಲೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಉಮೇಶ ಯಂಕಪ್ಪ ಎಂಬಾತನಿಂದ ವಿವಿಧ ಬ್ರಾಂಡ್ನ 63 ಮದ್ಯದ ಬಾಟಲ್ಗಳನ್ನು ಜಪ್ತಿ ಮಾಡಿ ಆರೋಪಿಯ ಬಂಧಿಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕೆಜೆಪಿ ವಕೀಲರ
ವೇದಿಕೆಗೆ ನೇಮಕ
ಯಾದಗಿರಿ: ಕರ್ನಾಟಕ ಜನತಾ ಪಕ್ಷದ ಜಿಲ್ಲೆಯ ವಕೀಲರ ವೇದಿಕೆ ಅಧ್ಯಕ್ಷರನ್ನಾಗಿ ಇಲ್ಲಿಯ ಶರಣಗೌಡ ಅಲ್ಲಿಪುರ ಅವರನ್ನು ನೇಮಕ ಮಾಡಿ ಪಕ್ಷದ ಜಿಲ್ಲಾಧ್ಯಕ್ಷ ಡಾ. ಮಲ್ಲನಗೌಡ ಪಾಟೀಲ ಉಕ್ಕಿನಾಳ ಆದೇಶಿಸಿದ್ದಾರೆ. ಜಿಲ್ಲೆಯ ಕೆಜೆಪಿ ಅಭ್ಯರ್ಥಿಗಳ ಗೆಲವಿಗೆ ಹಾಗೂ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಲ್ಲನಗೌಡ ಆದೇಶದಲ್ಲಿ ತಿಳಿಸಿದ್ದಾರೆ.