ಅಭಿವೃದ್ಧಿಗಾಗಿ ಜೆಡಿಎಸ್ ಬೆಂಬಲಿಸಿ
ಸುರುಪರ: ನಾನೊಬ್ಬ ಆಶಾವಾದಿ, ತಾಲೂಕಿನ ಅಭಿವೃದ್ಧಿ ಬಗ್ಗೆ ಸದಾ ಕನಸು ಕಾಣುವ ಕನಸುಗಾರ ಹಾಗೂ ಜನರ ಬೇಕು-ಬೇಡಗಳಿಗೆ ಸದಾ ಸ್ಪಂದಿಸುತ್ತಿದ್ದೇನೆ. ಇದು ಹೀಗೆ ಮುಂದುವರೆಯಲಿದೆ ಎಂದು ಜೆಡಿಎಸ್ ಅಭ್ಯರ್ಥಿ ರಾಜೂಗೌಡ ಭರವಸೆ ನೀಡಿದರು.
ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಶನಿವಾರ ಮತಯಾಚನೆ ಮಾಡಿ ಮಾತನಾಡಿ, ಎರಡು ಬಾರಿ ಸಚಿವನಾಗಿ ಮತ್ತು ಶಾಸಕನಾಗಿ ತಾಲೂಕಿನ ಮೂಲ ಸೌಕರ್ಯಗಳಿಗಾಗಿ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಇನ್ನುಳಿದವಕ್ಕಾಗಿ ಶ್ರಮಿಸಬೇಕು ಎಂಬುದು ನನ್ನ ಆಶಯವಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿ ನನ್ನ ಗುರಿ: ಪಟ್ಟಣ, ಗ್ರಾಮ ಎನ್ನುವ ತಾರತಮ್ಯವಿಲ್ಲದೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು ನನ್ನ ಗುರಿಯಾಗಿದೆ. ಈಗಾಗಲೇ ಕಳೆದ 10 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದು, ತಾಲೂಕಿನ ಅನೇಕ ಗ್ರಾಮಗಳಿಗೆ ಕುಡಿಯುವ ನೀರಿನ ಬವಣೆ ಶಾಶ್ವತವಾಗಿ ನಿವಾರಿಸುವ ಯೋಜನೆಯನ್ನು ರೂಪಿಸುವುದರ ಜೊತೆಗೆ ಶಿಕ್ಷಣ, ನೀರಾವರಿ, ವಸತಿ ಸೌಲಭ್ಯ ದೊರಕಿಸಿಕೊಡಲು ಪ್ರಮಾಣಿಕವಾಗಿ ಶ್ರಮಿಸಿದ್ದೇನೆ.
ಸಾಧನೆ ಬಗ್ಗೆ ತೃಪ್ತಿ: ಕ್ಷೇತ್ರದ ಎಲ್ಲಾ ಸಮುದಾಯದವರನ್ನು ಗುರುತಿಸುವ ಜೊತೆಯಲ್ಲಿ ಅವರ ಸಮುದಾಯವನ್ನು ಮುಖ್ಯ ವಾಹಿನಿಗೆ ತರುವ ಸದ್ದುದೇಶದಿಂದ ಸಮುದಾಯ ಮುಖಂಡರಿಗೆ ಅಧಿಕಾರ ನೀಡಿ ಎಲ್ಲ ಸಮಾಜದ ಏಳಿಗೆಗೆ ಒತ್ತು ನೀಡಿದ್ದೇನೆ. ಇದುವರೆಗಿನ ಸಾಧನೆ ಬಗ್ಗೆ ತೃಪ್ತಿ ಹಾಗೂ ಸಮಾಧಾನವಿದೆ. ಆದರೂ ಸಾಧಿಸಬೇಕಾದ್ದು ಸಾಗರದಷ್ಟಿದೆ. ಮತದಾರರ ಒಂದೊಂದು ಮತವು ಅಭಿವೃದ್ಧಿ ಪರವಾಗಿರಲಿ, ಒಬ್ಬ ಪ್ರಾಮಾಣಿಕ ಹೋರಾಟಗಾರನಾಗಿ ಎಂದಿಗೂ ಕ್ಷೇತ್ರದ ಮತದಾರರ ಜೊತೆಗಾರನಾಗಿ ಇರುತ್ತೇನೆ ಎಂದರು.
ನಾಯಕನಿಗೆ ಇಚ್ಚಾಶಕ್ತಿ ಬೇಕು: ಕ್ಷೇತ್ರ ಅಭಿವೃದ್ಧಿ ಆಗಬೇಕಾದರೆ ಆ ಕ್ಷೇತ್ರದ ನಾಯಕನಿಗೆ ಇಚ್ಚಾಶಕ್ತಿ ಬೇಕು. ನಾನು ಆ ಇಚ್ಛಾಶಕ್ತಿಯೊಂದಿಗೆ ಕೆಲವೇ ವರ್ಷಗಳಲ್ಲಿ ಸುರಪುರ ಕ್ಷೇತ್ರವು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುವಂತೆ ಮಾಡಿದ್ದೇನೆ. ಸದಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುವವರನ್ನು ಬೆಂಬಲಿಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಮತದಾರರಲ್ಲಿ ರಾಜೂಗೌಡ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪನಾಯಕ, ಯಲ್ಲಪ್ಪ ಕುರುಕುಂದಿ, ತಾಪಂ ಮಾಜಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಉಪಸ್ಥಿತರಿದ್ದರು.