'ಕಾಂಗ್ರೆಸ್‌ನಿಂದ ಮಾತ್ರ ರಾಜ್ಯದ ಅಭಿವೃದ್ಧಿ'
ಚಿತ್ತಾಪುರ: ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ತಮ್ಮ ಮುಖಂಡರ ಒಳಜಗಳದಲ್ಲೆ ಕಾಲ ಕಳೆದು ರಾಜ್ಯದ ಜನರಿಗೆ ವಂಚನೆ ಮಾಡಿದೆ. ಮತದಾರರು ಈ ಬಾರಿ ಬದಲಾವಣೆ ಬಯಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ಎದುರು ನೋಡುತ್ತಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ಹೇಳಿದರು.
ಪಕ್ಷದ ಕಚೇರಿಯಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದ್ದು ಆ ಪಕ್ಷದ ಸಚಿವರು, ಶಾಸಕರು, ಮುಖಂಡರು, ಬೇರೆ ಪಕ್ಷಕ್ಕೆ ಹೋಗುತ್ತಿರುವುದರಿಂದ ಪಕ್ಷದ ಮುಖಂಡರಿಗೆ ಸೋಲಿನ ಭೀತಿಯಾಗಿದೆ ಎಂದು ಹೇಳಿದರು.
ಟಿಕೆಟ್ ಬಗ್ಗೆ ಸ್ಪಷ್ಟನೆ: ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಗೆ ನಿಲ್ಲುವ ಹಕ್ಕು ಇದೆ. ನಾನು ಕಳೆದ 13 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ದುಡಿದಿದ್ದೇನೆ. ತಮ್ಮ ಮುಂದಾಳತ್ವದಲ್ಲಿ ನಡೆದ ಜಿಪಂ, ತಾಪಂ, ಎಪಿಎಂಸಿ, ಪುರಸಭೆ ಚುನಾವಣೆಯಲ್ಲಿ ಜಯಗಳಿಸಿವೆ. ತಮ್ಮ ಸಂಘಟನೆಯನ್ನು ನೋಡಿ ಪಕ್ಷದ ಹೈಕಮಾಂಡ್ ತಮಗೆ ವಿಧಾನಸಭೆಗೆ ಟಿಕೆಟ್ ನೀಡಲಾಗಿದೆ ವಿನಾಃ ಇಲ್ಲಿ ಕುಟುಂಬ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ಡಾ. ಪ್ರಭುರಾಜ ಕಾಂತಾ, ನಾಗರೆಡ್ಡಿ ಪಾಟೀಲ್ ಕರದಾಳ, ಸೋಮಶೇಖರ ಪಾಟೀಲ್, ಶಿವರುದ್ರ ಭೀಣಿ, ರಂಗನಾಥ ಜಡಿ, ಮುಕ್ತಾರ ಪಟೇಲ್, ಶಿವಕಾಂತ ಬೆಣ್ಣೂರಕರ್, ಸುರೇಶ ಅಳ್ಳೋಳ್ಳಿ, ಭೀಮು ಹೋತಿನಮಡಿ, ಮಲ್ಲಿಕಾರ್ಜುನ, ಡಾ. ಮಜರ್, ಸೈಯದ್ ಶೇಟ್, ನಜೀರ್ ಅಡಕಿ, ಮೋಹನ ಇತರರು ಇದ್ದರು.