ಮತ ಕೇಳುವ ನೈತಿಕ ಹಕ್ಕಿದೆ: ವಲ್ಯಾಪುರೆ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಏ.20
ಹಿಂದುಳಿದ ಭಾಗಕ್ಕೆ ಒಳಪಟ್ಟಿರುವ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಮೊದಲ ಬಾರಿಗೆ ಶಾಸಕರಾಗಿ, ಸಚಿವನಾಗಿ ತಮ್ಮ ಮತಕ್ಷೇತ್ರ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಿಸಿದ್ದೇನೆ. ಈ ಮತಕ್ಷೇತ್ರದ ಮತದಾರರಿಗೆ ಮತ ಕೇಳುವ ನೈತಿಕ ಹಕ್ಕಿದೆ ಎಂದು ಕೆಜೆಪಿ ಅಭ್ಯರ್ಥಿ ಮಾಜಿ ಸಚಿವ ಸುನೀಲ್ ವಲ್ಯಾಪುರೆ ವಿರೋಧ ಪಕ್ಷಗಳ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.
5 ವರ್ಷಗಳಲ್ಲಿ ಕೋಟ್ಯಾಂತರ ರು.: ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, 2008ರಲ್ಲಿ ವಿಧಾನಸಭಾ ಮತಕ್ಷೇತ್ರಗಳ ಪುನರ್ ವಿಂಗಡಣೆಯಾದ ನಂತರ ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಕಳೆದ 5 ವರ್ಷಗಳಲ್ಲಿ ಕೋಟ್ಯಾಂತರ ರು. ವಿವಿಧ ಯೋಜನೆ ಅಡಿಯಲ್ಲಿ ಮಂಜೂರಿಗೊಳಿಸಿ ಅಭಿವೃದ್ಧಿ ಪಡಿಸಿದ್ದೇನೆ ಎಂದರು.
ಅನುದಾನ: ಚಿಂಚೋಳಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಾದ ಮಿರಿಯಾಣ- ಚಿಂಚೋಳಿ ಅಂತರಾಜ್ಯ ರಸ್ತೆಗೆ 20.82: ಕೋಟಿ, ಚಿಂಚೋಳಿ- ಸೇಡಂ ರಸ್ತೆ ಅಭಿವೃದ್ಧಿಗೆ 30 ಕೋಟಿ, ಸುಲೇಪೇಟ್- ಮಹಾಗಾಂವ ರಸ್ತೆಗೆ 24.86 ಕೋಟಿ ಮಂಜೂರಾಗಿದ್ದು ಕಾಮಗಾರಿ ಪ್ರಾರಂಭಿಸಲಾಗಿದೆ. ಚಿಂಚೋಳಿ ಪಟ್ಟಣದ ಅಭಿವೃದ್ಧಿಗೆ 21.09 ಕೋಟಿ, ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ 46 ಗ್ರಾಮಗಳನ್ನು ಆಯ್ಕೆಗೊಳಿಸಿ 24.47 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗಿದೆಂದು ವಿವರಿಸಿದರು. ಇನ್ನು ಹಲವು ಗ್ರಾಮ ಮತ್ತು ತಾಂಡಾಗಳಿಗೆ ಹೆಚ್ಚಿನ ಅನುದಾನ ನೀಡಿ ಪ್ರಾಮಾಣಿಕತೆಯಿಂದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಜಿಲ್ಲೆಯಲ್ಲಿಯೇ ಚಿಂಚೋಳಿ ಮತಕ್ಷೇತ್ರ ಮಾದರಿ ಕ್ಷೇತ್ರವನ್ನಾಗಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಹೀಗಾಗಿ ತಮಗೆ ಮತ ಕೇಳುವ ನೈತಿಕ ಹಕ್ಕಿದೆ. ತಮ್ಮ ಗೆಲುವು ನಿಶ್ಚಿತ ಎಂದರು.