ಶಂಕ್ರಣ್ಣ ವಣಿಕ್ಯಾಳ ಪರ ಪ್ರಚಾರ
ಕ.ಪ್ರ.ವಾರ್ತೆ ಕೆಂಭಾವಿಏ.20
ಕೆಂಭಾವಿ ವಲಯದಲ್ಲಿ ಸುಮಾರು 65 ಸಾವಿರ ಮತಗಳನ್ನಿಟ್ಟುಕೊಂಡು ಬೇರೆಯವರಲ್ಲಿ ತಾಲೂಕು ಕೇಂದ್ರ ಮಾಡಿಎಂದು ಏಕೆ ಕೇಳುತ್ತೀರಿ. ಪ್ರಸ್ತುತ ಚುನಾವಣೆಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಥಳೀಯರಾದ ಶಂಕ್ರಣ್ಣ ವಣಿಕ್ಯಾಳ ಸ್ಪರ್ಧಿಸಿದ್ದು, ಅವರನ್ನು ಆಯ್ಕೆ ಮಾಡಿ ನಂತರ ಅಭಿವೃದ್ಧಿಯ ಬಗ್ಗೆ ಕೈ ಹಿಡಿದು ಕೇಳಿ ಎಂದು ಪಕ್ಷದ ಮುಖಂಡ ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ ಎಸ್.ಎನ್. ಹೊನಗುಂಟಿಕರ ಹೇಳಿದರು.
ಕೆಂಭಾವಿಯ ದಲಿತರ ಬಡಾವಣೆಯಲ್ಲಿ ಶಂಕ್ರಣ್ಣ ವಣಿಕ್ಯಾಳ ಅವರ ಪರ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಇಲ್ಲಿಯವರೆಗೆ ಆರಿಸಿ ಹೋದ ಶಾಸಕರು ಈ ವಲಯದ ಬಗ್ಗೆ ಕಾಳಜಿ ತೋರಿಸದೆ ಇರುವುದರಿಂದ ಈ ಪಟ್ಟಣವು ತಾಲೂಕಾ ಕೇಂದ್ರದಿಂದ ವಂಚಿತವಾಗುವಂತಾಗಿದೆ. ಇದಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ಬೇರೆ ಪಟ್ಟಣವನ್ನು ತಾಲೂಕು ಕೇಂದ್ರ ಎಂದು ಘೋಷಣೆ ಮಾಡಿದ್ದಾರೆ ಎಂದರು.
ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣ: ಈ ಪಟ್ಟಣದಲ್ಲೇ 38 ಸಾವಿರ ಜನಸಂಖ್ಯೆ ಇದ್ದು, ವಲಯದಲ್ಲಿ 2 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇದು ತಾಲೂಕಾ ಕೇಂದ್ರದಿಂದ ವಂಚಿತವಾಗಲು ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣ. ಈಗ ಬಡವರ, ಶ್ರಮಿಕರ, ರೈತರ ಪಕ್ಷವಾಗಿರುವ ಬಿಎಸ್ಸಾರ್ ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ವಣಿಕ್ಯಾಳ ಅವರನ್ನು ಬೆಂಬಲಿಸಿ ಎಂದು ಹೇಳಿದರು. ಅಭ್ಯರ್ಥಿ ಶಂಕ್ರಣ್ಣ ವಣಕ್ಯಾಳ ಮಾತನಾಡಿ, ನನಗೆ ರಾಜಕೀಯ ಜನ್ಮ ಕೊಟ್ಟ ಕೆಂಭಾವಿ ವಲಯದ ದಲಿತರ ಕೇರಿಯಲ್ಲಿ ಪೂಜೆ ಮಾಡಿ ಪ್ರಚಾರ ಆರಂಭಿಸಿದ್ದೇನೆ. 30 ವರ್ಷಗಳ ರಾಜಕೀಯದ ಅನುಭವ ಇರುವ ನನಗೆ ಕ್ಷೇತ್ರದ ಜನತೆಯ ಸಮಸ್ಯೆಗಳು ಏನೆಂಬುದು ಗೊತ್ತು. ನನ್ನನ್ನು ಶಾಸಕನಾಗಿ ಆರಿಸಿದರೆ ಶಹಾಪುರ ಮತಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತೇನೆ. ಪಕ್ಷದ ರಾಜ್ಯಾಧ್ಯಕ್ಷ ಶ್ರೀರಾಮುಲು ಅವರ ಕೈ ಬಲಪಡಿಸಲು ನನನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು. ಯುವ ಮುಖಂಡ ವಿಜಯರೆಡ್ಡಿ ಮುದನೂರ, ಬಸವಣ್ಣೆಪ್ಪ ಮಾಳಳ್ಳಿಕರ, ಸುರೇಶ ಮಾಳಳ್ಳಿಕರ, ಅನಿಲರಾಜ ತುಂಬಿಗಿ, ಮಜರ್ ಖಾಜಿ ಇತರರು ಇದ್ದರು