ಮತದಾನ ಬಹಿಷ್ಕಾರಕ್ಕೆ ನಿರ್ಧಾರ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.21
ಅಗತ್ಯ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿರುವ ಮಹಾನಗರ ಪಾಲಿಕೆಯ ವಾರ್ಡ್ ನಂ.24ರ ಬಡಾವಣೆಯ ನಾಗರಿಕರು ಮೇ 5ರಂದು ನಡೆಯುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ವಾರ್ಡ್ ನಂ. 24ರಲ್ಲಿ ಬರುವ ಮೋಮಿನಪುರಾ, ಬಾರಾಗಲ್ಲಿಯಲ್ಲಿ ರಸ್ತೆ, ಡ್ರೈನೆಜ್ ಹಾಗೂ ಕೊಳವೆಬಾವಿ ದುರಸ್ತಿಗಾಗಿ ಕಳೆದ 3 ವರ್ಷಗಳಿಂದ ಜಿಲ್ಲಾಧಿಕಾರಿ, ಆಯುಕ್ತರಿಗೆ ಮನವಿ ಮಾಡುತ್ತ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಚುನಾವಣೆ ಬಂದಾಗ ಮಾತ್ರ ಪಾಲಿಕೆ ಸದಸ್ಯರು ಹಾಗೂ ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಬಡಾವಣೆಗೆ ಬಂದು ಆಶ್ವಾಸನೆ ನೀಡಿ ಮತ ಪಡೆದು ಗೆದ್ದ ನಂತರ ಒಮ್ಮೆಯೂ ತಿರುಗಿ ನೋಡುವುದಿಲ್ಲ. ಹೀಗಾಗಿ ಬರುವ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ ಎಂದು ವಿಜಯ ಸಮಿತಿ ತರುಣ ಸಂಘ ಮತ್ತು ಪಂಚ ಮಂಡಳಿ ಕಮಿಟಿಯ ಅಧ್ಯಕ್ಷ ನಂದೀಶ್ವರ ಪಾಟೀಲ್, ಉಪಾಧ್ಯಕ್ಷ ಶರಣರಾಜ, ಪಿ. ಚಪ್ಪರಬಂದಿ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಕೆ. ಚಿಲ್ಲಾ, ಸಹ ಕಾರ್ಯದರ್ಶಿ ಭೀಮಾಶಂಕರ ಚಪ್ಪರಬಂದಿ ತಿಳಿಸಿದ್ದಾರೆ.