ಮತದಾನ ಹೆಚ್ಚಳಕ್ಕೆ ನೂತನ ಪ್ರಯೋಗ
- ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.21
ಮತದಾರರಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ತೀವ್ರ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ತಂದೆ- ಮಕ್ಕಳ ನುಡವಿನ ಭಾವನಾತ್ಮಕ ಸಂಬಂಧವನ್ನೂ ಬಳಸಿಕೊಳ್ಳುತ್ತಿದೆ. ಕಡ್ಡಾಯವಾಗಿ ಮತದಾನ ಮಾಡುವುದಾಗಿ ಮಕ್ಕಳ ಮೂಲಕ ಪಾಲಕರಿಂದ ಪ್ರಮಾಣ ಮಾಡಿಸಿಕೊಳ್ಳುವ ತಂತ್ರವನ್ನೂ ಆಯೋಗ ಕೈಗೊಂಡಿದೆ.
ಅದಕ್ಕಾಗಿ ಮತದಾರರು ಪ್ರಮಾಣ ಸ್ವೀಕರಿಸುವ ಪಾಂಪ್ಲೆಟ್‌ಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಮೂಲಕವಾಗಿ ಎಲ್ಲ ಶಾಲೆಗಳಿಗೆ ನೀಡಲಾಗಿದೆ. ಶಾಲಾ ಶಿಕ್ಷಕರು ಅವುಗಳನ್ನು ಮಕ್ಕಳಿಗೆ ನೀಡಿದ್ದು, ಅದರ ಮೇಲೆ ಪಾಲಕರಿಂದ ಸಹಿ ಮಾಡಿಸಿಕೊಂಡು ವಾಪಸ್ ನೀಡುತ್ತಿದ್ದಾರೆ. ಸುಮಾರು 1 ಲಕ್ಷ ಕಾರ್ಡುಗಳನ್ನು ಶಿಕ್ಷಣ ಇಲಾಖೆಗೆ ನೀಡಲಾಗಿದ್ದು, ಅವುಗಳಲ್ಲಿ ಸುಮಾರು 80 ಸಾವಿರ ಪ್ರತಿಗಳನ್ನು ಮಕ್ಕಳಿಗೆ ವಿತರಿಸಲಾಗಿದೆ. ಈ ಪೈಕಿ ಸದ್ಯ ಶಾಲೆಗಳಿಗೆ ರಜೆ ಇರುವುದರಿಂದ ಸುಮಾರು 30 ಸಾವಿರ ಮಕ್ಕಳು ತಮ್ಮ ಪಾಲಕರಿಂದ ಪ್ರಮಾಣ ಮಾಡಿಸಿ ಸಹಿ ಹಾಕಿಸಿಕೊಂಡು ವಾಪಸ್ ನೀಡಿದ್ದಾರೆ.
ಪವರ್ ತೋರಿಸುತ್ತೇನೆ: ಮತದಾನ ನನ್ನ ಸಂವಿಧಾನಬದ್ಧ ಹಕ್ಕಾಗಿದ್ದು, ಮತದಾನದ ದಿನದಂದು ತಪ್ಪದೇ ಮತ ಹಾಕುತ್ತೇನೆ. ಯಾವುದೇ ಆಮಿಷಗಳಿಗೆ ಹಾಗೂ ಬೆದರಿಕೆಗೆ ಬಗ್ಗುವುದಿಲ್ಲ. ನಾನೂ ಮತ ಹಾಕುತ್ತೇನೆ, ನನ್ನ ಮನೆಯವರಿಂದ ಹಾಗೂ ನೆರೆಹೊರೆಯವರಿಂದಲೂ ಮತ ಹಾಕಲು ಪ್ರೇರೇಪಿಸುತ್ತೇನೆ. ಮತದಾನಕ್ಕೆ ಯಾರ ವಾಹನವನ್ನೂ ಬಳಸುವುದಿಲ್ಲ. ಮೌಲ್ಯಾಧಾರಿತ ಮತದಾನ ಮಾಡಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ ನನ್ನ ಪವರ್ ತೋರಿಸುತ್ತೇನೆ ಎಂದು ಪ್ರಮಾಣ ಮಾಡಿ ಪಾಲಕರು ಸಹಿ ಮಾಡಬೇಕಿದೆ.
ಪ್ರತಿಶತ 70ರ ಗುರಿ: ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಈ ಹಿಂದಿನ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಕಳೆದ ವಿಧಾನಸಬಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 52ರಷ್ಟು ಮತದಾನವಾಗಿತ್ತು. ಆದ್ದರಿಂದ ಈ ಬಾರಿ ಅದನ್ನು ಕನಿಷ್ಠ ಶೇ.70ಕ್ಕೇರಿಸಲು ಜಿಲ್ಲಾಡಳಿತ ಎಲ್ಲ ಪ್ರಯತ್ನ ಮಾಡುತ್ತಿದೆ. ಕರಪತ್ರ ವಿತರಣೆ, ಜಾಥಾ, ಬೀದಿ ನಾಟಕ ಇತ್ಯಾದಿ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಸ್ವೀಪ್ ತಂಡ ಜಿಲ್ಲಾದ್ಯಂತ ಮತದಾರರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ.
ಸಂಘಸಂಸ್ಥೆಗಳಿಗೂ ಈ ನಿಟ್ಟಿನಲ್ಲಿ ಜವಾಬ್ದಾರಿ ನೀಡಲಾಗಿದ್ದು, ಶೇ.100 ಮತದಾನ ಮಾಡಿಸಿದರೆ ಅಂಥ ಸಂಘಸಂಸ್ಥೆಗೆ ಬಹುಮಾನ ನೀಡುವುದಾಗಿಯೂ ಜಿಲ್ಲಾ ಚುನಾವಣಾಧಿಕಾರಿ ಪಿ.ರಾಜೇಂದ್ರ ಚೋಳನ್ ಘೋಷಿಸಿದ್ದಾರೆ. ಒಟ್ಟಿನಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಈ ಬಾರಿ ಎಲ್ಲ ರೀತಿಯ ತಂತ್ರವನ್ನೂ ಕೈಗೊಳ್ಳಲಾಗಿದೆ.
ಗುಳೆ ಸಮಸ್ಯೆ: ಬರದಿಂದಾಗಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕುಡಿವ ನೀರಿಗೂ ತತ್ವಾರವಾಗಿದೆ. ಆದ್ದರಿಂದ ಬೇಸಿಗೆಯ ಐದಾರು ತಿಂಗಳ ಕಾಲ ಬಡ ಕಾರ್ಮಿಕರು ಕೆಲಸ ಅರಸಿ ಗುಳೆ ಹೋಗುತ್ತಾರೆ. ನೀರಿನ ಬವಣೆ ಎದುರಿಸುತ್ತಿರುವ ಗ್ರಾಮಗಳು ಈಗಾಗಲೇ ಖಾಲಿಯಾಗಿದೆ. ಇದು ಮತದಾನ ಪ್ರಮಾಣ ಕುಸಿಯಲು ಕಾರಣವಾಗಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಗುಳೆ ಹೋದವರನ್ನು ಕರೆತರಲು ಸಾಧ್ಯವಾಗುತ್ತಿಲ್ಲ.
ಸ್ಪರ್ಧಿಸಿರುವ ಅಭ್ಯರ್ಥಿಗಳೇ ಮತದಾರರನ್ನು ಕರೆತಂದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಗುಳೆ ಹೋದವರು ಮತದಾನಕ್ಕೆಂದು ಸಾವಿರಾರು ಖರ್ಚು ಮಾಡಿ ಬಂದು ಹೋಗುನ ಪರಿಸ್ಥಿತಿಯಲ್ಲೂ ಇಲ್ಲ. ಆದ್ದರಿಂದ ಮೇ 5ರಂದು ಎಷ್ಟು ಪ್ರಮಾಣದಲ್ಲಿ ಮತದಾನ ಆಗುತ್ತದೆ ಎನ್ನುವುದ್ನು ಹೇಳಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ತಂತ್ರಗಳು ಎಷ್ಟರಮಟ್ಟಿಗೆ ಫಲಿಸುತ್ತದೆ ಎನ್ನುವುದನ್ನು ಮೇ 8ರವರೆಗೆ ಕಾದು ನೋಡಬೇಕಿದೆ.