ರಾಮನವಮಿ ಉತ್ಸವ
ಕೆಂಭಾವಿ: ಶ್ರೀರಾಮಚಂದ್ರ ಹುಟ್ಟಿದ ಈ ಪವಿತ್ರ ನೆಲದಲ್ಲಿ ಹುಟ್ಟಿದ ನಾವೇ ಧನ್ಯರು. ಶ್ರೀರಾಮನ ಕಥೆ ಸಾರುವ ರಾಮಾಯಣವನ್ನು ನಾವು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜನ್ಮ ಪಾವನವಾಗುತ್ತದೆ ಎಂದು ಜಯ ಸತ್ಯ ಪ್ರಮೋದ ಸೇವಾ ಸಂಘದ ಅಧ್ಯಕ್ಷ ಸುರೇಂದ್ರರಾವ್ ಕುಲಕರ್ಣಿ ಹೇಳಿದರು.ಪಟ್ಟಣದ ಉತ್ತರಾದಿ ಮಠದಲ್ಲಿ ರಾಮನವಮಿ ಉತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮ ನಾಡು ರಾಮರಾಜ್ಯವಾಗಬೇಕಾದರೆ ಶ್ರೀರಾಮನ ಸಂಪೂರ್ಣ ಅನುಗ್ರಹವಾಗಬೇಕು. ಅದಕ್ಕಾಗಿ ಆತನನ್ನು ಮನಸಾ ಸ್ಮರಿಸಿದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಶ್ರೀರಾಮ ಅವತರಿಸಿದ ಈ ದಿನದಂದು ನಾವೆಲ್ಲರೂ ಅವನ ಸ್ಮರಣೆ ಮಾಡಿ ಅನುಗ್ರಕ್ಕೆ ಪಾತ್ರರಾಗೋಣ ಎಂದರು.
ವೈಶ್ಯ ಜನಗಣತಿ
ಯಾದಗಿರಿ: ರಾಜ್ಯಾದ್ಯಂತ ಆರ್ಯವೈಶ್ಯ ಮಹಾಸಭೆ ವತಿಯಿಂದ ಜನಗಣತಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿಯೂ ಜಿಲ್ಲಾ ಆರ್ಯವೈಶ್ಯ ಸಮಿತಿ ವತಿಯಿಂದ ಜನಗಣತಿ ಕಾರ್ಯ ಶುರುವಾಗಿದೆ. ಆದ್ದರಿಂದ ಈ ಕಾರ್ಯಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಸಮಿತಿ ಕಾರ್ಯದರ್ಶಿ ಸುಧಾಕರ ಓಬಳಶೆಟ್ಟಿ ತಿಳಿಸಿದ್ದಾರೆ. ಕಟ್ಟಕಡೆಯ ಹಳ್ಳಿಯ ಪ್ರತಿ ವ್ಯಕ್ತಿಯೂ ಮಹಾಸಭೆಯನ್ನು ತಲುಪಬೇಕೆಂಬ ಸದುದ್ದೇಶದಿಂದ ಈ ಜನಗಣತಿ ಕಾರ್ಯ ಪ್ರಾರಂಭಿಸಿದ್ದು, ಸಮಾಜದ ಬಾಂಧವರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಹೆಚ್ಚಿನ ವಿವರಗಳಿಗೆ ಜಿಲ್ಲಾಧ್ಯಕ್ಷ ಬಸ್ಸಯ್ಯ ಪಾಲಾದಿ ಅವರನ್ನು(ಮೊ.ಸಂ. 9448449816) ಸಂಪರ್ಕಿಸಲು ಕೋರಲಾಗಿದೆ.
ಆಯುಷ್ ಪದ್ಧತಿ ಅರಿವು ಮೂಡಿಸಿ
ಸುರಪುರ: ಆಯುಷ್ ಪದ್ಧತಿಯಲ್ಲಿನ ವಿಶೇಷ ಚಿಕಿತ್ಸೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸಮುದಾಯಕ್ಕೆ ಆಯುಷ್ ಆರೋಗ್ಯ ಶಿಕ್ಷಣ ನೀಡಬೇಕೆಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ವಂದನಾ ಗಾಳಿ ಕರೆ ನೀಡಿದರು. ಇಲ್ಲಿಯ ತಾಲೂಕು ಆರೋಗ್ಯಾಧಿಕಾರಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಆಯುಷ್ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಯುಷ್ ಪದ್ಧತಿಗಳಲ್ಲಿನ ನಾನಾ ವಿಭಾಗದ ಅರಿವು ಮೂಡಿಸುವುದು ಮತ್ತು ಸಮುದಾಯದ ಆರೋಗ್ಯಕ್ಕೆ ಆಯುಷ್ ಪದ್ಧತಿಯ ಸೇವೆ ಒದಗಿಸುವುದು ಮತ್ತು ಪದ್ಧತಿಯನ್ನು ಮುಖ್ಯವಾಹಿನಿಗೆ ತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಜಿಲ್ಲಾ ಆಯುಷ್ ನೋಡಲ್ ಅಧಿಕಾರಿ ಡಾ. ರಮೇಶ, ವೈದ್ಯಾಧಿಕಾರಿ ಶಫೀ ಉಜ್ಜಮಾ, ಅಯ್ಯನಗೌಡ ವೇದಿಕೆಯಲ್ಲಿದ್ದರು. ಡಾ. ಮಂಜುನಾಥ ಸಾಸನೂರ ಆಯುರ್ವೇದ ಮತ್ತು ಯೋಗ ಶಿಕ್ಷಕ ಭುವನ ಸುಂದರ ಯೋಗ ಕುರಿತು ಉಪನ್ಯಾಸ ನೀಡಿದರು.