ಕೆಜೆಪಿ ಪರಿಪೂರ್ಣ ಪ್ರಾದೇಶಿಕ ಪಕ್ಷ
ಕ.ಪ್ರ. ವಾರ್ತೆ, ಯಾದಗಿರಿ, ಏ.22
ರಾಜ್ಯದಲ್ಲಿ ಕೆಜೆಪಿ ಪರಿಪೂರ್ಣ ಪ್ರಾದೇಶಿಕ ಪಕ್ಷವಾಗಿದ್ದು, ಮುಂದಿನ ದಿನಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಸಾಹಿತಿ ಡಾ. ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.
ಇಲ್ಲಿಯ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರದಲ್ಲಿ ಯಾವ ರಾಷ್ಟ್ರೀಯ ಪಕ್ಷವೂ ಸ್ವಂತ ಬಲದಿಂದ ಅಧಿಕಾರ ನಡೆಸಲು ಸಾಧ್ಯವಿಲ್ಲ. ಅಲ್ಲದೇ ಪ್ರಾದೇಶಿಕ ಪಕ್ಷಗಳ ಸಹಕಾರ ಪಡೆದು ಕೇಂದ್ರದಲ್ಲಿ ಆಡಳಿತ ನಡೆಸುವಂತಾಗಿದೆ. ರಾಜ್ಯಗಳ ಹಿತ ಕಾಪಾಡಲು ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಿವೆ ಎಂದರು.
ಪಕ್ಕದ ಆಂಧ್ರ, ತಮಿಳುನಾಡು ಇನ್ನಿತರ ರಾಜ್ಯಗಳು ಈ ನಿಟ್ಟಿನಲ್ಲಿ ಯಶಸ್ಸು ಗಳಿಸಿವೆ. ಇದುವರೆಗೆ ರಾಜ್ಯದ ಸಮಸ್ಯೆಗೆ ಕೇಂದ್ರದಿಂದ ಸಾಧ್ಯವಾಗಿಲ್ಲ. ಆದ್ದರಿಂದ ಪರಿಪೂರ್ಣವಾದ ಪ್ರಾದೇಶಿಕ ಪಕ್ಷ ರಾಜ್ಯಕ್ಕೆ ಅನಿವಾರ್ಯವಾಗಿದ್ದು, ಉಳಿದ ಪಕ್ಷಗಳಿಗಿಂತ ಕೆಜೆಪಿಯಿಂದ ಕನ್ನಡ ನಾಡಿನ ಹಿತ ಕಾಪಾಡಲು ಸಾಧ್ಯವಿದೆ ಎಂದು ಅವರು ಹೇಳಿದರು.
ಕೆಜೆಪಿ ಪರಿಪೂರ್ಣ ಪ್ರಾದೇಶಿಕ ಪಕ್ಷ: ಕೇಂದ್ರ ಸರ್ಕಾರದಲ್ಲಿ ರಾಜ್ಯದ ನಾಲ್ವರು ಸಚಿವರಿದ್ದರೂ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ನದಿ, ಗಡಿ ವಿಚಾರ ಬಂದಾಗ ತಮಿಳುನಾಡು ಕೈಗೊಳ್ಳುವ ಗಟ್ಟಿ ನಿರ್ಧಾರವನ್ನು ರಾಜ್ಯದ ಸಂಸದರು ಕೈಗೊಳ್ಳುತ್ತಿಲ್ಲ. ಸ್ಥಳೀಯ ಸಮಸ್ಯೆ ಪರಿಹಾರಕ್ಕೆ, ಇಲ್ಲಿಯ ಭಾಷೆ, ಸಂಸ್ಕೃತಿ ಉಳಿವಿಗಾಗಿ ರಾಜಕೀಯ ಶಕ್ತಿ ಪ್ರಯೋಗ ಅನಿವಾರ್ಯವಾಗುತ್ತದೆ. ಆದರೆ ಪ್ರಾದೇಶಿಕ ಪಕ್ಷಗಳಾಗಿರುವ ಬಿಎಸ್ಸಾರ್ ಕಾಂಗ್ರೆಸ್ ಹಿನ್ನೆಲೆ ಸರಿಯಿಲ್ಲ. ಇನ್ನು ಜೆಡಿಎಸ್ ಪರಿಪೂರ್ಣ ಪ್ರಾದೇಶಿಕ ಪಕ್ಷವಾಗಿವಾಗಿಲ್ಲ. ಆದ್ದರಿಂದ ಎಲ್ಲ ಜಾತಿ, ಜನಾಂಗದವರು, ಮಹಿಳೆಯರು, ಎಲ್ಲ ಭಾಗಕ್ಕೂ ಪ್ರಾತಿನಿಧ್ಯ ನೀಡುತ್ತಿರುವುದು ಕೆಜೆಪಿ ಮಾತ್ರ. ಆದ್ದರಿಂದ ತಾವು ಕೆಜೆಪಿ ಬೆಂಬಲಿಸುತ್ತಿರುವುದಾಗಿ ಚಂಪಾ ತಿಳಿಸಿದರು.
ರಾಜಕೀಯ ಹೊರತುಪಡಿಸಿದ ಸಾಹಿತ್ಯವಿಲ್ಲ: ಕೆಜೆಪಿ ಭದ್ರವಾದ ಸಾಮಾಜಿಕ ಬುನಾದಿ ಹೊಂದಿದೆ. ಬಿಜೆಪಿ ಬಿಟ್ಟು ಕೋಮುವಾದಿ ಶಕ್ತಿಯಿಂದ ಯಡಿಯೂರಪ್ಪ ಹೊರಬಂದಿದ್ದಾರೆ. ಆದ್ದರಿಂದ ಎಲ್ಲ ಕನ್ನಡಪರ ಸಂಘಟನೆಗಳು, ಶಕ್ತಿಗಳು ರಾಜ್ಯದ ಹಿತಕ್ಕಾಗಿ ಕೆಜೆಪಿ ಬಲಪಡಿಸಬೇಕು. ಎಲ್ಲ ಸಾಹಿತಿಗಳೂ ರಾಜಕೀಯದಿಂದ ಹೊರತಾಗಿಲ್ಲ. ರಾಜಕೀಯ ಹೊರತುಪಡಿಸಿದ ಸಾಹಿತ್ಯವೂ ಇಲ್ಲ. ಆದರೆ ತಾವು ನೇರವಾಗಿ ಒಂದು ಪಕ್ಷಕ್ಕೆ ಸೇರಿಕೊಂಡಿದ್ದರಲ್ಲಿ ಯಾವ ತಪ್ಪೂ ಇಲ್ಲ. ಕೆಜೆಪಿಗೆ ರಾಜ್ಯದಲ್ಲಿ ಉತ್ತಮ ಭವಿಷ್ಯವಿದೆ. ಈ ಚುನಾವಣೆಯಲ್ಲಿ ಅದು ಗೊತ್ತಾಗಲಿದೆ ಎಂದು ಹೇಳಿದರು.
ಕೆಜೆಪಿ ಹಿಂ.ವರ್ಗ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿಲೀಪ ಬಿರಾದಾರ, ರಾಜ್ಯ ಕಾರ್ಯದರ್ಶಿ ಎನ್.ಯೋಗೇಶರಾವ ಸಲಗಾರ್, ಅಯ್ಯಣ್ಣ ಹುಂಡೇಕಾರ, ಮಾರುತಿ ಕಲಾಲ್ ಇದ್ದರು.