ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕ್ಷೇತ್ರ ಹಿಂದುಳಿಯಲು ಹಾಲಿ ಶಾಸಕರು ಕಾರಣ

Rashmi Kasaragodu
Updated On : 23 Apr 2013, 12:24 pm

ಕನ್ನಡಪ್ರಭ ವಾರ್ತೆ   ಯಾದಗಿರಿ   ಏ.22
ಗುರುಮಠಕಲ್ ಕ್ಷೇತ್ರ ರಾಜ್ಯದಲ್ಲೇ ಹಿಂದುಳಿಯುವಂತಾಗಲು ಹಾಲಿ ಶಾಸಕರೇ ಕಾರಣ. ಇದರಿಂದಾಗಿ ಅಭಿವೃದ್ಧಿ ಕುಂಠಿತವಾಗಿದ್ದು, ಜನ ಕೆಲಸಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಆದ್ದರಿಂದ ಈ ಬಾರಿ ಯಡಿಯೂರಪ್ಪ ನೇತೃತ್ವದ ಕೆಜೆಪಿ ಬೆಂಬಲಿಸಿ ಎಂದು ಪಕ್ಷದ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಮನವಿ ಮಾಡಿದರು.
ಮತಕ್ಷೇತ್ರದ ಬಸವಂತಪುರ, ಬಸವಂತರಪುರ ತಾಂಡಾ, ಕ್ಯಾಸಪನಹಳ್ಳಿ ಗ್ರಾಮದಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ಹಾಲಿ ಶಾಸಕರು ಕೇವಲ ಸುಳ್ಳು ಹೇಳಿಯೇ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅಭಿವೃದ್ಧಿಗೆ ಬಂದ ಅನುದಾನವನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳು ಮನೆಗೆ ಹೋಗುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.
ನೂತನ ಜಿಲ್ಲೆ ಬಿಎಸ್‌ವೈ ಕೊಡುಗೆ: ನೀರಾವರಿ ಯೋಜನೆಗೆ ಕಿಂಚಿತ್ತೂ ಗಮನ ನೀಡಿಲ್ಲ. ಇದರಿಂದ ಕೃಷಿಕರು, ಕೂಲಿ ಕಾರ್ಮಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಬಗ್ಗೆಯೂ ಜನತೆ ಭ್ರಮನಿರಸನಗೊಂಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪನವರಿಂದಾಗಿ ಯಾದಗಿರಿ ಜಿಲ್ಲೆ ರಚನೆಗೊಂಡಿದ್ದು, ಈ ಬಾರಿ ರಾಜ್ಯದ ಮತದಾರರು ಕೆಜೆಪಿ ಕೈ ಹಿಡಿಯಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಯಾದಗಿರಿ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವ ಮೂಲಕ ಈ ಭಾಗದ ಜನತೆಯ ದಶಕಗಳ ಕನಸನ್ನು ಯಡಿಯೂರಪ್ಪ ನನಸು ಮಾಡಿದ್ದಾರೆ. ಮಾತ್ರವಲ್ಲ, ಇತ್ತೀಚೆಗೆ ಗುರಮಠಕಲ್ ಪಟ್ಟಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕೆಜೆಪಿ ಅಧಿಕಾರಕ್ಕೆ ಬಂದರೆ ಮತಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ವಾಗ್ದಾನ ನೀಡಿದ್ದು, ಮತದಾರರು ನನ್ನನ್ನು ಆಶೀರ್ವದಿಸಬೇಕು ಎಂದು ಕೋರಿದರು.
ಜನತೆಗೆ ಚಿಂಚನಸೂರ ದ್ರೋಹ: ಗುರಮಠಕಲ್ ಕ್ಷೇತ್ರದಲ್ಲಿ 5 ವರ್ಷ ಆಡಳಿತ ನಡೆಸಿದ ಶಾಸಕ ಬಾಬುರಾವ ಚಿಂಚನಸೂರ ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಕ್ಷೇತ್ರದ ಜನತೆಗೆ ದ್ರೋಹ ಬಗೆದಿದ್ದಾರೆ. ಇದರಿಂದ ಮತಕ್ಷೇತ್ರದಲ್ಲಿ ಸಮಸ್ಯೆಗಳು ತಾಂಡವಾಡುತ್ತಿದ್ದು ಇನ್ನಾದರೂ ಮತದಾರರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡು, ಅಭಿವೃದ್ಧಿಗಾಗಿ ಕೆಜೆಪಿ ಬೆಂಬಲಿಸಬೇಕೆಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement