ನಾಯಕರಿಂದ ಪಕ್ಷಾಂತರ ಪರ್ವ ಜೋರು, ಎಲ್ಲ ಪಕ್ಷಗಳಲ್ಲಿ ತಳಮಳ
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಏ.22
ಚಿತ್ತಾಪುರ ಮತಕ್ಷೇತ್ರದಲ್ಲಿ ವಿವಿಧ ಪಕ್ಷಗಳ ರಾಜಕೀಯ ನಾಯಕರ, ಕಾರ್ಯಕರ್ತರ ಪಕ್ಷಾಂತರ ಜೋರಾಗಿ ನಡೆದಿದ್ದು, ಇದು ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬಿರುವುದೆಂದು ಮತದಾರರು ಮಾತಾಡಿಕೊಳ್ಳುವಂತಾಗಿದೆ.
ಜೆಡಿಎಸ್ ಭದ್ರಕೋಟೆ: ಒಂದು ಕಾಲಕ್ಕೆ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿತ್ತು. ಜೆಡಿಎಸ್ ಮುಖಂಡ ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರ, ತಾಲೂಕು ಅಧ್ಯಕ್ಷ ಡಿ.ಎಸ್. ನಾಮದಾರ, ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ, ಪಕ್ಷದ ಹಿರಿಯ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಶಿವಗೋಳ ಪಕ್ಷ ತೊರೆದು ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಇಂದು ನಾಯಕರಿಲ್ಲದೆ ಜೆಡಿಎಸ್ ಅನಾಥವಾಗಿದೆ.
ಈ ಕ್ಷೇತ್ರದಿಂದ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಅವರು ಶಾಸಕರಾಗಿ 3 ಬಾರಿ ಅಧಿಕಾರ ಅನುಭವಿಸಿದ್ದಾರೆ. ಕ್ಷೇತ್ರ ಪುನರ್ ವಿಗಂಡನೆಯಿಂದ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಕಾಂಗ್ರೆಸ್ ಪಕ್ಷ ಸೇರಿದರು.
ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರ ಅವರು ಜಿಪಂ ಸದಸ್ಯರಾಗಿದ್ದರು. ಕಳೆದ ಎರಡು ಬಾರಿ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕಳೆದ ಪುರಸಭೆ ಚುನಾವಣೆಯಲ್ಲಿ 23 ವಾರ್ಡ್ಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸಿ ಪಕ್ಷ ಸಂಘಟನೆಗೊಳಿಸಿ ಜೀವಂತವಾಗಿಟ್ಟಿದ್ದರು.
ಪಕ್ಷದ ಹಿರಿಯ ಮುಖಂಡ ಮಲ್ಲಿನಾಥ ಇಂದೂರ ಅವರು ಸತತವಾಗಿ 5ನೇ ಬಾರಿಗೆ 17 ವರ್ಷಗಳಿಂದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜನತಾ ಪರಿವಾರದ ಕಟ್ಟಾಭಿಮಾನಿಗಳಾದ ಬಸವರಾಜ ಶಿವಗೋಳ, ಬಾಬುಮಿಯ್ಯ ಕಲಗುರ್ತಿ ಸೇರಿದಂತೆ ಅನೇಕರು ಪಕ್ಷ ತೊರೆದು ಕೆಜೆಪಿ ಹೊಗಿದ್ದಾರೆ. ಬಿಜೆಪಿಯ ತಾಪಂ ಸದಸ್ಯರಾದ ಮಾರುತಿ, ಸಂಜಿವಕುಮಾರ, ಲಕ್ಷ್ಮೀ ಯಂಕಾರೆಡ್ಡಿ, ಸಿದ್ದಣ್ಣ ಜಮದಾರ ಸೇರಿದಂತೆ 5 ಜನ ಸದಸ್ಯರು ಕೆಜೆಪಿ ಸೇರಿದ್ದಾರೆ.
ಕಾಂಗ್ರೆಸ್ಗೆ ಸೇರ್ಪಡೆ
ಬಿಜೆಪಿ ಪಕ್ಷ ತೊರೆದು ಕೆಜೆಪಿ ಪಕ್ಷವನ್ನು ಚಿತ್ತಾಪುರದಲ್ಲಿ ಸಂಘಟಿಸಿದ ಯುವ ಮುಖಂಡ ರವೀಂದ್ರ ಸಜ್ಜನಶೆಟ್ಟಿ ಅವರು ಕೆಜೆಪಿ ಅಧ್ಯಕ್ಷ ಮಾಡಲಿಲ್ಲ ಎಂದು ಮುನಿಸಿಕೊಂಡು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದಾರೆ.
ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಲಿಲ್ಲ ಎಂದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ ಮಾಜಿ ಪುರಸಭೆ ಅಧ್ಯಕ್ಷ ನಾಗರಾಜ ಬಂಕಲಗಿ ಅವರು ಪುನ ಕಾಂಗ್ರೆಸ್ ಪಕ್ಷ ಸೇರಿದರು.
ಬಿಜೆಪಿ ಪಕ್ಷದ ಮುಖಂಡ ನಗರ ಆಶ್ರಯ ಸಮಿತಿ ಸದಸ್ಯ ಬಸವರಾಜ ಚಿನ್ನಮಳ್ಳಿ, ಕೋಲಿ ಸಮಾಜದ ಮುಖಂಡ ಮಲ್ಲಣ ಸಣಬೋ ಬಿಜೆಪಿ ತೊರೆದು ಮಾಜಿ ಸಚಿವ ಗುರುಮಿಠಕಲ್ ಶಾಸಕ ಬಾಬುರಾವ ಚಂಚನಸೂರ ಅವರ ಸಮುಖ್ಯದಲ್ಲಿ ನೂರಾರು ಕೋಲಿ ಸಮಾಜದ ಮುಖಂಡರೊಂದಿಗೆ ಶನಿವಾರ ಕಾಂಗ್ರೆಸ್ ಪಕ್ಷ ಸೇರಿದರು.
ಸೇರ್ಪಡೆ ಜೋರು
ಮತಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಬಲು ಜೋರಾಗಿದೆ. ದಿನನಿತ್ಯ ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುವುದು ನಡೆದಿದೆ. ದಿಗ್ಗಾಂವ, ಅಲ್ಲೂರ, ಹೊಸ್ಸರು, ಅಳ್ಳಳ್ಳಿ, ಭೀಮನಹಳ್ಳಿ, ಪೇಠಶಿರೂರು ಮುಂತಾದ ಕಡೆ ಮುಖಂಡರು, ಕಾರ್ಯಕರ್ತರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ಕಾಂಗ್ರೆಸ್ಗೆ ಆನೆ ಬಲ ಬಂದಂತಾಗಿದೆ. ಹೀಗಾಗಿ ಪಕ್ಷದ ಗೆಲವು ಸುಲಭ ಎಂದು ಪಕ್ಷದ ಅಭ್ಯರ್ಥಿ ಪ್ರಿಯಾಂಕ್ ವಿಶ್ವಾಸ ಹೊಂದಿದ್ದಾರೆ.
ಪಕ್ಷಾಂತರದಿಂದ ಬಿಜೆಪಿ ಪಕ್ಷಕ್ಕೆ ತುಂಬಾ ನಷ್ಟ ಉಂಟಾಗುತ್ತಲಿದೆ. ಬಹುತೇಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಹಾಗೂ ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿ ವಾಲ್ಮೀಕಿ ನಾಯಕ ಅರಿಗೆ ಯಾವ ಪರಿಣಾಮ ಬೀರುವುದೆಂದು ಚುನಾವಣಾ ಮುಗಿದ ನಂತರ ಗೋತ್ತಾಗಲಿದೆ.