ಮಾರುತಿ ಮಾನ್ಪಡೆ ಗೆಲವಿಗೆ 'ಬೇಬಿ' ಮನವಿ
ಕನ್ನಡಪ್ರಭ ವಾರ್ತೆ, ಆಳಂದ, ಏ.22
ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ಮಾರುತಿ ಮಾನ್ಪಡೆ ಅವರು ಜನಪರ ಧ್ವನಿಯಾಗಿದ್ದು, ರೈತರ, ಕಾರ್ಮಿಕರ ಪರ ನಿರಂತರ ಹೋರಾಟ ಮಾಡುವ ವ್ಯಕ್ತಿಯನ್ನು ಈ ಭಾಗದ ಮತದಾರರು ಚುನಾಯಿಸಿ ಕಳುಹಿಸಬೇಕು ಎಂದು ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಎಂ.ವಿ. ಬೇಬಿ ಮನವಿ ಮಾಡಿದರು.
ತಾಲೂಕಿನ ವಿ.ಕೆ. ಸಲಗರ ಗ್ರಾಮದಲ್ಲಿ ಭಾನುವಾರ ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರ ಸಿಪಿಐ(ಎಂ) ಅಭ್ಯರ್ಥಿ ಮಾನ್ಪಡೆ ಪರ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಚುನಾವಣೆ ಬಂದಾಗೊಮ್ಮೆ ಕಾಂಗ್ರೆಸ್- ಬಿಜೆಪಿ ಮುಖಂಡರು ಜನರ ಸಮಸ್ಯೆ ನಿವಾರಿಸುವ ಕುರಿತು ಮಾತನಾಡುತ್ತಾರೆ. ಆದರೆ ಇದುವರೆಗೂ ಯಾವ ಸಮಸ್ಯೆ ನಿವಾರಿಸಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಎಡಪಕ್ಷಗಳ ಹೊಂದಾಣಿಕೆ ಮಾಡಿಕೊಂಡು 50 ಕಡೆ ಅಭ್ಯರ್ಥಿ ಕಣದಲ್ಲಿದ್ದಾರೆ. ಅಧಿಕಾರಕ್ಕೆ ಬಂದರೆ ಮೂಲ ಸಮಸ್ಯೆಗಳ ನಿವಾರಣೆ ಕೈಗೊಳ್ಳಲಾಗುವುದು ಎಂದರು.
ಅಭ್ಯರ್ಥಿ ಮಾರುತಿ ಮಾನ್ಪಡೆ ಮಾತನಾಡಿ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ಸಚಿವ ರೇವುನಾಯಕ ಅವರು ದೀರ್ಘಕಾಲದ ಅಧಿಕಾರದಿಂದ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ರೈತರ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಿ ಜನರ ಸಂಪತ್ತು ಲೂಟಿ ಮಾಡಿದ್ದಾರೆ ಎಂದರು ಟೀಕಿಸಿದರು.
ರೈತರ, ಕಾರ್ಮಿಕರ, ಸಾಮಾನ್ಯರ ಬೇಡಿಕೆಗಳಿಗೆ ನಿರಂತರವಾಗಿ ಹೋರಾಟಕ್ಕೆ ಧ್ವನಿ ನೀಡಿದ ಮತದಾರರು ಈ ಚುನಾವಣೆಯಲ್ಲೂ ನನಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದರೆ ವಿಧಾನಸಭೆಯಲ್ಲಿ ನಿಮ್ಮ ಧ್ವನಿಯನ್ನು ಪ್ರತಿಪಾದಿಸಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜು, ರೈತ ಸಂಘದ ಜಿಲ್ಲಾಧ್ಯಕ್ಷ ಮೇಘರಾಜ ಕಠಾರೆ, ತಾಪಂ ಸದಸ್ಯ ಕಲ್ಲಪ್ಪ ಚಲ್ಲಿ, ಅಪ್ಪಾರಾವ ವಾಡಿ, ಶಾಂತಪ್ಪ ಪಾಟೀಲ್ ಸಣ್ಣೂರ, ಮಹಿಬೂಬಶಾ ಕುಕೋಟೆ, ನಾಗೇಂದ್ರಮ್ಮ ಗುತ್ತೇದಾರ, ದಯಾನಂದ ಪಾಟೀಲ್ ಹೊಡಲ, ವೀರಭದ್ರಪ್ಪ ಕಲಬುರ್ಗಿ ಇದ್ದರು.
ಬಸವಣ್ಣಪ್ಪ ರಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಾಂಡುರಂಗ ಮಾವಿನ ಸ್ವಾಗತಿಸಿದರು. ಮೋಹನ ಎಂ. ಕಟ್ಟಿಮನಿ ನಿರೂಪಿಸಿದರು.