ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಂಡಿದೆ: ಬಿಎಸ್ವೈ
ಸುಲೇಪೇಟ್ ಗ್ರಾಮದಲ್ಲಿ ವೈಜನಾಥ ಪಾಟೀಲ್ ಪರ ಪ್ರಚಾರದ ಬಹಿರಂಗ ಸಭೆ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಏ.22
ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ ರಾಷ್ಟ್ರೀಯ ಬಿಜೆಪಿ ನಾಯಕರ ಭಾಷಣ ಕೇಳಲು ಸಹ ಜನ ಬೆಂಬಲ ಸಿಗುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದು ಕೆಜೆಪಿ ರಾಜ್ಯಾಧ್ಯಕ್ಷ, ಯಡಿಯೂರಪ್ಪ ಅವರು ಲೇವಡಿ ಮಾಡಿದರು.
ಸೇಡಂ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಸುಲೇಪೇಟ್ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಅವರಣದಲ್ಲಿ ಏರ್ಪಡಿಸಿದ ಕೆಜೆಪಿ ಅಭ್ಯರ್ಥಿ ಹೈ.ಕ. ಹೋರಾಟಗಾರ ವೈಜನಾಥ ಪಾಟೀಲ್ ಪರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅಸ್ತಿತ್ವವಿಲ್ಲ: ಎಲ್.ಕೆ. ಅಡ್ವಾಣಿ, ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರ ಪ್ರಚಾರ ಸಭೆಗೆ ಜನ ಸೇರದಿರುವುದು ನೋಡಿದರೆ ಬಿಜೆಪಿ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಂತಾಗಿದೆ ಎಂದರು.
ಸೇಡಂ ವಿಧಾನಸಭೆಗೆ ಕೆಜೆಪಿ ಅಭ್ಯರ್ಥಿ ವೈಜನಾಥ ಪಾಟೀಲರು ಒಬ್ಬ ಧೀಮಂತ ಹೋರಾಟಗಾರ ಅವರ ಹೋರಾಟಕ್ಕೆ ನಾನು ಬೆಂಬಲ ನೀಡಿದ್ದೇನೆ. ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ನಿಟ್ಟಿನಲ್ಲಿ ಸಂವಿಧಾನದ 371 (ಜೆ) ತಿದ್ದುಪಡಿಗೆ ವಿಧಾನಸಭೆಯಲ್ಲಿ ಐತಿಹಾಸಿಕವಾಗಿ ಅನುಮೋದನೆ ಮಾಡಿಸಿದ್ದೇನೆ. ಕೆಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದ ಭಾಗದ ಮಕ್ಕಳು ಮೆಡಿಕಲ್, ಎಂಜಿನಿಯರಿಂಗ್ ಶಿಕ್ಷಣದ ವೆಚ್ಚವನ್ನು ಸರ್ಕಾರದಿಂದ ಭರಿಸುವ ಪ್ರಯತ್ನ ಮಾಡಿಸುತ್ತೇನೆ ಎಂದರು.
95 ಸಾವಿರ ಕೋಟಿ ಖರ್ಚು: ಮಹಿಳೆಯರಿಗೆ ಆರ್ಥಿಕ ನೆರವು, ಸ್ತ್ರೀಶಕ್ತಿ ಗುಂಪುಗಳಿಗೆ ಹೈನುಗಾರಿಕೆ ಮತ್ತು ಬ್ಯಾಂಕಿನ ಸಾಲ ನೀಡಲಾಗುವುದು, ಡಾ. ನಂಜುಂಡಪ್ಪಾ ವರದಿಯು ಕಸದ ತೊಟ್ಟಿಗೆ ಸೇರಿತ್ತು, ರಾಜ್ಯದ ಮುಖ್ಯಮಂತ್ರಿಯಾದಾಗ 95 ಸಾವಿರ ಕೋಟಿ ಖರ್ಚು ಮಾಡಿದ್ದೇನೆ. ಹಿಂದುಳಿದ ಪ್ರದೇಶದ ರೈತರ ಜಮೀನುಗಳು ನೀರಾವರಿ ಸೌಕರ್ಯಗಳನ್ನು ಕೃಷ್ಣ ಮತ್ತು ಕಾವೇರಿ ಕೊಳ್ಳ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ಮಾಜಿ ಸಚಿವ ಸುನೀಲ್ ವಲ್ಯಾಪುರೆ, ಬಾಬುರಾವ ಪಾಟೀಲ್, ಮಾಜಿ ಉಪಸಭಾಪತಿ ಚಂದ್ರಶೇಖರ ರೆಡ್ಡಿ ದೇಶಮುಖ ಮದನಾ, ನರೇಶ ಮಲಕೂಡ, ಡಾ. ವಿಕ್ರಂ ಪಾಟೀಲ್, ಸೈಯದ್ ಮಸ್ತಾನ ವಕೀಲರು, ರವಿರಾಜ ಕೊರವಿ, ಗೌತಮ ಪಾಟೀಲ್ ಉಪಸ್ಥಿತರಿದ್ದರು. ಬಸವರಾಜ ಸುಲೇಪೇಟ್ ಸ್ವಾಗತಿಸಿದರು.