ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹೈ- ಕ ಹಿಂದುಳಿಯಲು 'ಕೈ' ಕಾರಣ: ಶೆಟ್ಟರ್

Rashmi Kasaragodu
Updated On : 23 Apr 2013, 12:21 pm

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ. 22
ಹೈದ್ರಾಬಾದ್ ಕರ್ನಾಟಕ ಭಾಗ ತಾನು ಸಾಕ್ಷಿಯಾದ ಚುನಾವಣೆಗಳಲ್ಲಿ ಸಿಂಹಪಾಲು ಕಾಂಗ್ರೆಸ್ಸಿಗೆ ಬೆಂಬಲಿಸುತ್ತ ಸಾಗಿದ್ದೇ ಅದರ ಹಿಂದುಳಿದಿರುವಿಕೆಗೆ ಕಾರಣ ಎಂದು ಹೇಳಿರುವ ಸಿಎಂ ಶೆಟ್ಟರ್ ಇನ್ನಾದರೂ ಈ ಭಾಗದ ಜನ ಎಚ್ಚೆತ್ತುಕೊಂಡು ಪ್ರಗತಿ ಚಿಂತನೆಯ ಬಿಜೆಪಿಗೆ ಬೆಂಬಲಿಸಬೇಕು, ಆ ಮೂಲಕ ತನ್ನನ್ನು ತಾನೇ ಅಭಿವೃದ್ಧಿಪರ ಆಡಳಿತಕ್ಕೆ ಸಮರ್ಪಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಕಾಂಗ್ರೆಸ್ ಕೊಡುಗೆ ಶೂನ್ಯ: ಗುಲ್ಬರ್ಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಭಾಗವಹಿಸಿದ್ದ ಶೆಟ್ಟರ್ ಖರ್ಗೆ ಹಾಗೂ ಧರಂಸಿಂಗ್‌ರನ್ನು ಹೆಸರಿಸುತ್ತ 40 ವರ್ಷ ಆಡಳಿತ ಮಾಡಿರುವ ಕಾಂಗ್ರೆಸ್ ಏನು ಕೊಡುಗೆ ನೀಡಿದೆ. ರಾಜ್ಯವನ್ನೇ ಹಾಳು ಮಾಡಿದೆ. ಇಲ್ಲಿನ ನಾಯಕರಾದ ಧರಂ- ಖರ್ಗೆ ಸತತ ಗೆದ್ದು ಬಂದರೂ ಈ ಕ್ಷೇತ್ರ ಪ್ರಗತಿ ಕಾಣಲಿಲ್ಲ ಎಂದ ಮೇಲೆ ಕಾಂಗ್ರೆಸ್ಸಿನ ಪ್ರಗತಿ ಮಂತ್ರಿ ಯಾವ ಸ್ವರೂಪದ್ದು ಎಂಬುದನ್ನು ನೀವೇ ವಿಮರ್ಶಿಸಿರಿ ಎಂದು ಸೇರಿದ್ದ ಜನತೆಗೆ ಕರೆ ನೀಡಿದರು.
ನಾಯಕರ ಗೊಂದಲ: ಕಾಂಗ್ರೆಸ್‌ನಲ್ಲಿ ನಾಯಕರು ಯಾರು ಎಂಬುದೇ ಗೊಂದಲದಲ್ಲಿದೆ. ಖರ್ಗೆ, ಸಿದ್ಧರಾಮಯ್ಯ, ಮೋಯ್ಲಿ, ಕೃಷ್ಣ ಸೇರಿದಂತೆ ಅನೇಕರು ಸಿಎಂ ಆಕಾಂಕ್ಷಿಗಳಾಗಿದ್ದರೂ ಒಳಗೊಳಗೆ ಅಂಜುತ್ತಿದ್ದಾರೆ. ಇಂತಹ ಗೊಂದಲದ ಗೂಡಾಗಿರುವ ಪಕ್ಷಕ್ಕೆ ಬೆಂಬಲ ನೀಡುತ್ತೀರೋ, ಮುಂದಿನ ನಾಯಕ ಯಾರೆಂದು ನಿರ್ಧರಿಸಿರುವ ಬಿಜೆಪಿಗೆ ಬೆಂಬಲಿಸಿತ್ತೀರೋ, ಪ್ರಜ್ಞಾವಂತ ಜನತೆ ಯೋಚಿಸಿ ಎಂದರು.
ಕಲಂ 371 ವಿಧೇಯಕವಾಗಲು ಕಾಂಗ್ರೆಸ್ ತಾನೇ ಕಾರಣ ಎಂದು ಹೇಳುತ್ತ ಸಾಗಿದೆ. ಆ ಪಕ್ಷದ ನಾಯಕರಾದಂತಹ ಖರ್ಗೆ, ಧರಂಸಿಂಗ್ ಇದೇ ಕಾರಣಕ್ಕೆ ಎಲ್ಲಾಕಡೆ ಸನ್ಮಾನ ಮಾಡಿಸಿಕೊಳ್ಳುತ್ತಿದ್ದಾರೆ. ಕಲಂ 371 ಬೇಡಿಕೆ ಈಡೇರಲು ಕಾಂಗ್ರೆಸ್ ಕಾರಣವಲ್ಲ. ಈ ಭಾಗದಲ್ಲಿನ ಜನತೆ ನಿರಂತರ ನಡೆಸಿದ ಹೋರಾಟ ಕಾರಣ, ಇದನ್ನು ಎಲ್ಲರೂ ಅರಿಯಬೇಕು ಎಂದರು.
ಅಭಿವೃದ್ಧಿಗೆ ಜನ ಬೆಂಬಲ: ಹೋದಕಡೆಗಳಲ್ಲೆಲ್ಲಾ ಜನ ಬೆಂಬಲ ಸಾಕಷ್ಟು ಇದೆ ಎಂದು ಹೇಳುತ್ತ ಈ ಬಾರಿ 135 ರಿಂದ 140 ಸ್ಥಾನಗಳು ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು. ರಾಷ್ಟ್ರೀಯ ನಾಯಕರು ಸಹ ಸಭೆಗಳಿಗೆ ಹರಿದು ಬರುತ್ತಿರುವ ಜನಸಾಗರ ಕಂಡು ಅಚ್ಚರಿಗೊಂಡಿದ್ದಾರೆಂದು ಹೇಳುತ್ತ ಅಭಿವೃದ್ಧಿಗೆ ಜನ ಬೆಂಬಲ ಇದ್ದೇ ಇರುತ್ತದೆ ಎಂದು ಜನರಿಗೆ ಕೃತಜ್ಞತೆ ಹೇಳಿದರು.
ರೇವುನಾಯಕ ಬೆಳಮಗಿ, ದೊಡ್ಡಪ್ಪಗೌಡ ಪಾಟೀಲ್, ರಘುನಾಥ ಮಲ್ಕಾಪುರೆ, ರಾಜಗೋಪಾಲರೆಡ್ಡಿ, ಬಸವರಾಜ ಪವಾಡಶೆಟ್ಟಿ, ದತ್ತಾತ್ರೇಯ ಪಾಟೀಲ್, ಮುಕುಂದ ದೇಶಪಾಂಡೆ, ವಿದ್ಯಾಸಾಗರ ಶಾಬಾದಿ, ವಿದ್ಯಾಸಾಗರ ಕುಲ್ಕರ್ಣಿ, ಮಹಾಂತಗೌಡ ಪಾಟೀಲ್, ನಾಮದೇವ ರಾಠೋಡ, ಅರುಣಾ ಪಾಟೀಲ್, ಸಾಹೇಬಗೌಡ ಸೇರಿದಂತೆ ಅನೇಕರು ಇದ್ದರು.
ಜೆಡಿಎಸ್ ತೊರೆದು ಸುಭಾಸ ರಾಠೋಡ, ವಸಂತ ಜಾಧವ ಸೇರಿದಂತೆ ಅನೇಕರು ಬಿಜೆಪಿ ಪಕ್ಷವನ್ನು ಸೇರಿದರು. ಇವರೆಲ್ಲರಿಗೂ ಪಕ್ಷದ ಬಾವುಟ ನೀಡಿ ಶೆಟ್ಟರ್ ಬರಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement