ಅಬಕಾರಿ ದಾಳಿ, ಇಬ್ಬರ ಬಂಧನ
ಯಾದಗಿರಿ: ಜಿಲ್ಲಾಧಿಕಾರಿ ಆದೇಶದಂತೆ ಅಬಕಾರಿ ಅಧಿಕಾರಿಗಳು ಆಂಧ್ರದ ಗಡಿ ಭಾಗದಲ್ಲಿ ರಸ್ತೆ ಕಾವಲು ಮಾಡುತ್ತಿದ್ದಾಗ ತಾಲೂಕಿನ ಬದ್ದೇಪಲ್ಲಿ ಕ್ರಾಸ್ ಹತ್ತಿರ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸೇಂದಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳವಾರ ಬಂಧಿಸಿದ್ದಾರೆ.ವಾಹನ ತಪಾಸಣೆಗೆ ಒಳಪಡಿಸಿದಾಗ 10ಲೀಟರ್ ಸೇಂದಿ ದೊರೆತಿದ್ದು, ಅವರು ಬಳಸಿದ್ದ ದ್ವಿಚಕ್ರ ವಾಹನ ಮತ್ತು ಸೇಂದಿ ಜಪ್ತಿಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಭೀಮಯ್ಯ ತಿಪ್ಪಣ್ಣ ದೊಡ್ಡಸಂಬ್ರ, ಸಾಬಣ್ಣ ಹಣಮಂತ ದೊಡ್ಡಸಂಬ್ರ ಬಂಧಿತ ಆರೋಪಿಗಳು. ಅಬಕಾರಿ ಇಲಾಖೆ ಅಧಿಕಾರಿಗಳಾದ ವಿಠ್ಠಲ ರಾವ್ ಎಂ. ವಾಲೀನೂರ, ಮಹ್ಮದ ಹಾಗೂ ಸಿಬ್ಬಂದಿ ಶರಪೋದ್ದಿನ್ ಎನ್., ಸಾಯಪ್ಪಾ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಭೀಮಸೇನ, ಅಶೋಕ, ಮಹ್ಮದ ರಫೀಕ ಇದ್ದರು.
ಗೌರಮ್ಮ ಗೌಡತಿ ಮತ ಯಾಚನೆ
ಶಹಾಪುರ: ಕ್ಷೇತ್ರದ ಕೆಜೆಪಿ ಅಭ್ಯರ್ಥಿಯಾಗಿ ಮಗ ಗುರುಪಾಟೀಲ ಶಿರವಾಳ ಚುನಾವಣಾ ಕಣಕ್ಕಿಳಿದಿದ್ದು, ಆತನನ್ನು ಗೆಲ್ಲಿಸುವುದು ನಿಮ್ಮ ಜವಾಬ್ದಾರಿ ಎಂದು ಗುರು ಪಾಟೀಲರ ತಾಯಿ ಗೌರಮ್ಮ ಗೌಡತಿ ಪಟ್ಟಣದಲ್ಲಿ ಮತ ಯಾಚಿಸಿ ಮನವಿ ಮಾಡಿದರು. ಪಟ್ಟಣದ ವಾರ್ಡ್ ನಂ.17ರಲ್ಲಿ ಮತ ಯಾಚಿಸಿದ ಅವರು, ಈ ಹಿಂದೆ ನಮ್ಮ ಯಜಮಾನರಾದ ದಿ. ಶಿವಶೇಖರಪ್ಪ ಗೌಡರು ಎಲ್ಲರ ಬಗ್ಗೆಯೂ ಬಹಳ ಕಾಳಜಿ ಮಾಡ್ತಿದ್ದರು. ಅವರ ಹೆಸರು ಅದೇ ರೀತಿ ಉಳಿಸಬೇಕಾದರೆ ಮಗ ಗುರುಪಾಟೀಲನನ್ನು ಆರಿಸಿ ತರುವುದು ನಿಮ್ಮೆಲ್ಲರ ಹೊಣೆ. ಈ ಬಾರಿ ಅವರನ್ನು ಆಯ್ಕೆ ಮಾಡಿ ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಗುರುಪಾಟೀಲರ ಸಹೋದರಿಯರು ಮತ್ತು ಪುರಸಭೆ ಸದಸ್ಯರಾದ ವಸಂತ ಸುರಪುರ, ಮುಖಂಡ ಖುರೇಶಿ ಸೇರಿದಂತೆ ಅನೇಕ ಮಹಿಳೆಯರು ಇದ್ದರು.