ದಕ್ಷಿಣಾಧಿಪತ್ಯಕ್ಕೆ ಹಣಾಹಣಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.23
ವ್ಯಕ್ತಿ- ಕುಟುಂಬ ಪ್ರತಿಷ್ಠೆ ಪಣಕ್ಕಿಟ್ಟ ಕಣ. ತುರುಸಿನ ಪೈಪೋಟಿ ಅಂಗಳ, ಹೋರಾಟದ ಕೆಚ್ಚು ಇರುವವರ ಸ್ಪರ್ಧೆ, ವಲಸೆ ಹಕ್ಕಿಯ ಗೂಡು ಕಟ್ಟುವ ತವಕ. ಸೇಡಿಗೆ ಸೇಡು, ಸೇರಿಗೆ ಸವ್ವಾಸೇರು, ಮುಯ್ಯಿಗೆ ಮುಯ್ಯಿ ರಾಜಕೀಯದ ಅಖಾಡ...
ಇವೆಲ್ಲವುಗಳನ್ನು ತನ್ನೊಡಲೊಳಗೆ ಇಟ್ಟುಕೊಂಡಿದೆ ಗುಲ್ಬರ್ಗ ದಕ್ಷಿಣ ಅಸೆಂಬ್ಲಿ ಕಣ. ಎರಡೂವರೆ ವರ್ಷಗಳ ಹಿಂದಷ್ಟೆ(2010) ಉಪ ಚುನಾವಣೆಗೆ ಸಾಕ್ಷಿಯಾಗಿ ತುರುಸಿನ ಹಣಾಹಣಿ ಕಂಡಿದ್ದ ಈ ಅಖಾಡದಲ್ಲೀಗ ನ ಭೂತೋ... ಎಂಬಂತೆ ಹಿಂದೆಂದೂ ಕಂಡು- ಕೇಳರಿಯದಂತಹ ಪೈಪೋಟಿ, ರಾಜಕೀಯ ಗೊಂದಲಗಳು ಕಾಣಿಸಿಕೊಂಡಿವೆ.
ಚತುಷ್ಕೋನ ಸ್ಪರ್ಧೆ: ನಮೋಶಿ, ರೇವೂರ್, ಕಾಂತಾ, ಕೈಲಾಸ್ ಮಧ್ಯೆ ದಕ್ಷಿಣಾಧಿಪತ್ಯಕ್ಕಾಗಿ ತುರುಸಿನ ಹಾಗೂ ಚತುಷ್ಕೋನ ಹೋರಾಟ ಕಂಡಿದೆ. ಈ ನಾಲ್ವರ ಪೈಕಿ ನಮೋಶಿ ಹಾಗೂ ದತ್ತು ರೇವೂರ್ ಅವರಂತೂ ತಮ್ಮದೆಲ್ಲವನ್ನೂ ಪಣಕ್ಕಿಟ್ಟು ಈ ಕಣದಲ್ಲಿ 'ಮಾಡು ಇಲ್ಲವೇ ಮಡಿ' ಹೋರಾಟಕ್ಕಿಳಿದಿದ್ದಾರೆ.
ನಮೋಶಿ- ರೇವೂರ್ ಜಿದ್ದಾಜಿದ್ದಿ ರಾಜಕೀಯದ ಈ ಕಣ ಕ್ಷಣ ಕ್ಷಣವೂ ಅಚ್ಚರಿಗಳ ಸಂತೆ. ಸಾರ್ವಜನಿಕವಾಗಿ ಕುತೂಹಲ ಕೆರಳಿರಸಿರುವ ರಾಜಕೀಯ ಅಂಗಳವಾಗಿ ಜಿಲ್ಲೆಯಲ್ಲೇ ತೀವ್ರ ಸುದ್ದಿಗೆ ಗ್ರಾಸವಾಗಿದೆ.
ಸೂಪರ್ ಮಾರ್ಕೆಟ್ ಅಕ್ಕಪಕ್ಕದಲ್ಲೇ ಇರುವ ದತ್ತಾತ್ರೇಯ ರೇವೂರ್ ಒಡೆತನದ ಆದರ್ಶ ಮೆಡಿಕಲ್ಸ್, ನಮೋಶಿ ಒಡೆತನದ ಓಲ್ಗಾ ಡ್ರೆಸಸ್ ನಗರದಲ್ಲೇ ಹೆಸರುವಾಸಿ ಮಳಿಗೆಗಳು. ಇಲ್ಲಿನ ಜನತೆ ಇವರಿಬ್ಬರನ್ನು ಈ ವಹಿವಾಟಿನೊಂದಿಗೇ ಗುರುತಿಸುತ್ತ ದಕ್ಷಿಣದ ಗಾದಿಗಾಗಿನ ಗುದ್ದಾಟದಾಗ ಆದರ್ಶ ಗೌಡ್ರು- ಓಲ್ಗಾ ಮಾಲಕ್ರಲ್ಲಿ ಅದ್ಯಾರು ಗೆಲ್ತಾರೋ ಎಂಬ ನಿರೀಕ್ಷೆಯಲ್ಲಿದ್ದಾರೆ.
ನಗರ- ಗ್ರಾಮೀಣ ಪ್ರದೇಶಗಳ ಸಂಗಮ: ಗುಲ್ಬರ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಾರ್ಡ್ 31ರಿಂದ 55(25 ವಾರ್ಡ್ಗಳು) ಹಾಗೂ ಪಟ್ಟಣ ಹೋಬಳಿಯ 40ಕ್ಕೂ ಹೆಚ್ಚು ಹಳ್ಳಿಗಳ ವ್ಯಾಪ್ತಿಯ ದಕ್ಷಿಣ ಅಸೆಂಬ್ಲಿ ಕಣ ನಗರ- ಗ್ರಾಮೀಣ ಮತದಾರರ ಸಂಗಮ ಕ್ಷೇತ್ರ. ಮೇಲ್ವರ್ಗದ(ವಿಪ್ರರು, ಲಿಂಗಾಯತರು) ಮತಗಳ ಪ್ರಾಬಲ್ಯ ಇರುವ ಕ್ಷೇತ್ರವಾದ್ದರಿಂದ ಇಲ್ಲಿಂದ ಗೆಲ್ಲುವ ಕುದುರೆಯಾಗುವುದು ಬಲು ನಾಜೂಕಿನ ವಿಚಾರ.
ಇಂತಹ ಕ್ಷೇತ್ರ ಇದೀಗ ಜಿದ್ದಾಜಿದ್ದಿ ರಾಜಕೀಯದ ಚಕ್ರವ್ಯೂಹ. ದತ್ತಾತ್ರೇಯ ಪಾಟೀಲ್ ರೇವೂರ್(ಅಪ್ಪುಗೌಡ) ಜೆಡಿಎಸ್ ಟಿಕೆಟ್ ಒಲ್ಲೆಂದು ಕೊನೆ ಕ್ಷಣ ಅಚ್ಚರಿಯಾಗಿ ಬಿಜೆಪಿ ಅಪ್ಪಿಕೊಂಡಿದ್ದರಿಂದ ತೀವ್ರ ಮುಖಭಂಗ ಎದುರಿಸಿದ್ದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಹಿರಿಯ ನಾಯಕ ಶಶಿಲ್ ನಮೋಶಿ ಜೆಡಿಎಸ್ ಸೇರ್ಪಡೆಯಾಗಿ ಕಣದಲ್ಲಿ ಧುಮುಕಿದಾಗ ಇಲ್ಲಿನ ರಾಜಕೀಯ ಶಾಂತ ಸಾಗರದಲ್ಲಿ ಸುನಾಮಿ ಅಲೆಗಳು ಕಾಣುವಂತೆ ಮಾಡಿದೆ.
ಟಿಕೆಟ್ ಕೊಡುವಂತೆ ದುಂಬಾಲು ಬಿದ್ದರೂ ವಿಪ್ರರಿಗೆ ಕೈಕೊಟ್ಟು ಕಾಂಗ್ರೆಸ್ ಇಲ್ಲಿ ವಲಸೆ ಹಕ್ಕಿ ರೂಪದಲ್ಲಿರುವ ಚಿಂಚೋಳಿಯ ಕೈಲಾಸ ಪಾಟೀಲ್ ಅವರಿಗೆ ಮಣೆ ಹಾಕಿ ಪರಂಪರಾಗತ ಮತ ಬ್ಯಾಂಕ್ ಜೊತೆಗೆ ನಮೋಶಿ- ರೇವೂರ್ ಜಗಳದ ಲಾಭದ ಹವಣಿಕೆಯಲ್ಲಿದೆ. ಹೋರಾಟಗಾರ, 76ರ ವಯೋವೃದ್ಧ ನಾಯಕ ಎಸ್.ಕೆ. ಕಾಂತಾ ಇದು ಕೊನೆಯ ಚುನಾವಣೆ ಎಂದಿದ್ದರಿಂದ ಕಣದಲ್ಲಿದ್ದು ಕಾವು ಕಂಡಿದ್ದು ಚತುಷ್ಕೋನ ಸ್ಪರ್ಧೆಗೆ ನಾಂದಿ ಹೇಳಿದೆ.
ಜಾತಿ ಸಮೀಕರಣ, ಲಾಭ- ನಷ್ಟ ಚರ್ಚೆ: ಪ್ರಬಲ ಲಿಂಗಾಯತ ಕೋಮಿನಲ್ಲಿರುವ ಆದಿ, ದೀಕ್ಷ, ಪಂಚಮ ಒಳ ಪಂಗಡಗಳ ಲೆಕ್ಕಾಚಾರದಲ್ಲೇ ಇಲ್ಲಿ ರಾಜಕೀಯ ಶುರುವಾಗಿದೆ. ಇದಲ್ಲದೆ ವಿಪ್ರ ಮತಗಳು ಯಾರ ಪರ ಎಂಬ ಚರ್ಚೆಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಮತ ಬ್ಯಾಂಕ್ ಎಂದೇ ಗುರುತಿಸಿಕೊಂಡಿರುವ ಎಸ್ಸಿ- ಎಸ್ಟಿ, ಒಬಿಸಿ ಮತಗಳನ್ನು ಕಾಂಗ್ರೆಸ್ ಪೂರ್ಣ ಉಳಿಸಿಕೊಳ್ಳುವಲ್ಲಿ ಯಶ ಕಾಣುವುದೋ, ಈ ಮತ ಬ್ಯಾಂಕ್ನಲ್ಲಿ ಯಾರು ಎಷ್ಟು ಲಾಭ ಮಾಡಿಕೊಳ್ಳಬಹುದು ಎಂಬುದರ ಮೇಲೆಯೂ ದಕ್ಷಿಣಾಧಿಪತ್ಯ ನಿರ್ಧರಿಸುವ ಯತ್ನಗಳು ಸಾಗಿವೆ.
ಸತತ 2 ಬಾರಿ(2004, 2008ರಲ್ಲಿ) ಬಿಜೆಪಿಗೆ ಒಲಿದಿದ್ದ ಈ ಕ್ಷೇತ್ರ 2010ರಲ್ಲಿ ಕಂಡ ಉಪ ಚುನಾವಣೆಯಲ್ಲಿ ಆ ಸಂದರ್ಭದ ಬೆಳವಣಿಗೆ ಎಂಬಂತೆ ಜೆಡಿಎಸ್ಗೆ ಒಲಿದಿದ್ದು ವಾಸ್ತವ. ಬಿಜೆಪಿ ರೇವೂರ್ ಕುಟಂಬಕ್ಕೆ ಉಪ ಚುನಾವಣೆಯಲ್ಲಿ ಟಿಕೆಟ್ ಕೊಡದೆ ನಿರಾಕರಿಸಿದ್ದರಿಂದ ಆ ಕುಟುಂಬ ಜೆಡಿಎಸ್ ಮೊರೆ ಹೋಗಿ ಗೆದ್ದಿದ್ದು ಇತಿಹಾಸ. ಇದೀಗ ಅದೇ ಪುನರಾವರ್ತನೆಯಾಗಿದೆ.
ವೋಟ್ ಬ್ಯಾಂಕ್ ರಾಜಕೀಯ: ದತ್ತು ಜೆಡಿಎಸ್ ಅಭ್ಯರ್ಥಿತ್ವ ಒಲ್ಲೆಂದು ಬಿಜೆಪಿ ಸೇರಿ ಆ ಪತ್ರದ ಹುರಿಯಾಳಾಗಿದ್ದಾರೆ. ಮನನೊಂದ ನಮೋಶಿ ಜನಾಗ್ರಹದ ಮೇರೆಗೆ ಕಣದಲ್ಲಿರುವೆ ಎಂದು ಜೆಡಿಎಸ್ ಮೊರೆ ಹೊಕ್ಕು ಅಖಾಡದಲ್ಲಿದ್ದಾರೆ.
ಇವರಿಬ್ಬರಿಗೂ ಮೇಲ್ವರ್ಗದ ಮತಗಳೇ ವೋಟ್ ಬ್ಯಾಂಕ್. ಈ ಮತಗಳ ಕಟ್ಟು ಯಾರು ಎಷ್ಟು ಪಡೆಯುವರೋ ಎಂಬುದೇ ಕುತೂಹಲ. ಶೋಷಿತ, ಹಿಂದುಳಿದ ವರ್ಗಗಳಲ್ಲಿ ಅದೆಷ್ಟು ಮತ ಯಾರು ಪಡೆಯುವರೋ ಎಂಬುದರ ಮೇಲೆ ಗೆಲವು ಆಧರಿಸಿದೆ.
ನಮೋಶಿ ಜೆಡಿಎಸ್ನಲ್ಲಿರುವುದರಿಂದ ಅಲ್ಪಸಂಖ್ಯಾತ ಮತಗಳಲ್ಲಿ ಕೆಲಭಾಗ ಪಡೆಯುವ ಸಾಧ್ಯತೆಗಳಿದ್ದರೆ, ದತ್ತು ರೇವೂರ್ ಪಾಲಿಕೆ ಚುನಾವಣೆಯಲ್ಲಿ ಎಸ್ಸಿ- ಎಸ್ಟಿ ಸಮುದಾಯಕ್ಕೆ ತಕ್ಕ ಪ್ರಾತಿನಿಧ್ಯ ನೀಡಿದ್ದರಿಂದ ಅಲ್ಲಿಂದಲೂ ನೆರವು ಹೊಂದುವ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿಯ ಮತ ಬ್ಯಾಂಕ್ ಎಂದೇ ಗುರುತಿಸಿಕೊಂಡಿರುವ ನಗರ ವಿಪ್ರ ಬಾಂಧವರ ಮತಗಳು ಈ ಬಾರಿ ಯಾರತ್ತ ವಾಲುವುದೋ ನಿಗೂಢ!
ಕಾಂಗ್ರೆಸ್ ಅಲಕ್ಷಿಸುವಂತಿಲ್ಲ: ಮತ ವಿಭಜನೆ ಕಾಂಗ್ರೆಸ್ಸಿಗೂ ಅನುಕೂಲವಾಗುವ ಸಾಧ್ಯತೆಗಳಿವೆ. ತನ್ನ ಪರಂಪರಾಗತ ಮತಗಳೊಂದಿಗೆ ಗಟ್ಟಿಯಾಗಿರುವ ಈ ಪಕ್ಷ ಉಪ ಚುನಾವಣೆಯಲ್ಲಿ ಹೆಚ್ಚಿನ ಮತ ಪಡೆದಿದ್ದನ್ನು ಗಮನಿಸಿದರೆ ಈಗಿನ ರಾಜಕೀಯ ವಾತಾವರಣ 'ಕೈ' ಪಡೆಗೆ ಹೆಚ್ಚಿನ ಬಲ ನೀಡುವಂತಿದೆ.
ಕೈಲಾಸ ಪಾಟೀಲ್ ಸ್ಥಳೀಯವಾಗಿ ಚಿರಪರಿತವಲ್ಲ ಎಂಬ ಮಾತುಗಳಿದ್ದರೂ ಅನ್ಯ ಪಕ್ಷಗಳ ನಡುವಿನ ಹೆಚ್ಚುತ್ತಿರುವ ಪೈಪೋಟಿ ಸಹಜವಾಗಿಯೇ ಕಾಂಗ್ರೆಸ್ಸಿಗೆ ಸ್ಪರ್ಧೆಯ ದಾರಿಯಲ್ಲಿ ಎಳೆದು ನಿಲ್ಲಿಸುತ್ತಿದೆ ಲಿಂಗಾಯತ ಸಮುದಾಯದ ಕೈಲಾಸ ಪಾಟೀಲ್ ಬರುವ ದಿನಗಳಲ್ಲಿ ಈ ಬೆಳವಣಿಗೆಗೆ ಸ್ಪಂದಿಸಿದಲ್ಲಿ ದಕ್ಷಿಣ ಅಚ್ಚರಿಯ ಫಲಿತಾಂಶದ ಕಣವಾಗುವುದನ್ನು ಅಲ್ಲಗಳೆಯಲಾಗದು.
ಕಣದಲ್ಲಿ 26 ಅಭ್ಯರ್ಥಿಗಳು: ಕೈಲಾಸನಾಥ ಪಾಟೀಲ್- ಕಾಂಗ್ರೆಸ್, ದತ್ತಾತ್ರೇಯ ಸಿ. ಪಾಟೀಲ್ ರೇವೂರ(ಅಪ್ಪುಗೌಡ)-ಬಿಜೆಪಿ, ಶಶಿಲ್ ಜಿ. ನಮೋಶಿ- ಜೆಡಿಎಸ್, ಎಸ್.ಕೆ. ಕಾಂತಾ- ಕೆಜೆಪಿ, ವಾಸುದೇವರಾವ ಭೀಮರಾವ- ಬಿಎಸ್ಪಿ, ಅಬ್ದುಲ್ ಹಮೀದ್ ಖುರೇಶಿ- ಇಂಡಿಯನ್ ಯೂನಿಯನ್ ಮುಸ್ಲೀಂ ಲೀಗ್, ಆರ್.ಡಿ. ಕಟ್ಟಿಮನಿ- ಸಮಾಜವಾದಿ ಜನತಾ ಪಾರ್ಟಿ ಕರ್ನಾಟಕ, ವಿ. ನಾಗಮ್ಮಾಳ- ಎಸ್ಯುಸಿಐ(ಸಿ), ಪಾರ್ವತಿ ಜಗನ್ನಾಥ ಚವ್ಹಾಣ- ನ್ಯಾಷನಲ್ ಡೆವಲಪಮೆಂಟ್ ಪಾರ್ಟಿ, ಬಷೀರ್ ಆಲಂ- ಇಂಡಿಯನ್ ನ್ಯಾಷನಲ್ ಲೀಗ್, ವೀರೇಶ ಈ. ರಾಠೋಡ(ಈಶ್ವರ)- ಆಲ್ ಇಂಡಿಯಾ ಪಾರ್ವರ್ಡ್ ಬ್ಲಾಕ್, ಎ.ಬಿ. ಹೊಸಮನಿ- ಆರ್ಪಿಐ(ಎ), ಅಬ್ದುಲ್ ವಾಹೀದ್ ಖಾನ್- ಪಕ್ಷೇತರ, ಕಾರ್ಕಲ್ ಸಂಜೀವಕುಮಾರ- ಪಕ್ಷೇತರ, ಗುರುದೇವಪ್ಪ ಎಸ್. ನರೋಣೆ- ಪಕ್ಷೇತರ, ಗುರುಶಾಂತ ಪಟ್ಟೇದಾರ- ಪಕ್ಷೇತರ, ದಿನಕರರಾವ ನಾರಾಯಣರಾವ ಕುಲಕರ್ಣಿ-ಪಕ್ಷೇತರ, ಪೂಜಾರಿ ಧರ್ಮವೀರ ಎಸ್. ಪಟ್ಟಣ-ಪಕ್ಷೇತರ, ಬಸವರಾಜ ಚಿಂಚೋಳಿ- ಪಕ್ಷೇತರ, ಮಹ್ಮದ್ ಝಾಕೀರ್ ಹುಸೇನ್(ಬಡೆಬಹಿ)- ಪಕ್ಷೇತರ, ವಿನೋದಕುಮಾರ ಅನ್ವರಕರ್- ಪಕ್ಷೇತರ, ವೆಂಕಟೇಶ ಡೋರೆಪಲ್ಲಿ- ಪಕ್ಷೇತರ, ಶಶಿಕಾಂತ ಆರ್. ದೀಕ್ಷಿತ- ಪಕ್ಷೇತರ, ಸಂದೀಪ ಎಸ್. ಪಾಟೀಲ್-ಪಕ್ಷೇತರ, ಸೈಯ್ಯದ್ ಉಸ್ಮಾನ್ ಪಾಶಾ- ಪಕ್ಷೇತರ, ಹಣಮಂತರಾಯ ಎಂ. ಪೂಜಾರಿ- ಪಕ್ಷೇತರ.
ಎಸ್.ಕೆ. ಕಾಂತಾ ಹೆಚ್ಚು ಪ್ರಬಲ
ಎಸ್.ಕೆ. ಕಾಂತಾ ತಾವು ಸ್ಪರ್ಧಿಸಿರುವ 6 ಚುನಾವಣೆಗಳಲ್ಲಿ 2ರಲ್ಲಿ ಗೆದ್ದವರು. ಆದರೆ ಸೋಲುಂಡ ಚುನಾವಣೆಗಳಲ್ಲೆಲ್ಲ 10 ಸಾವಿರ ಆಸುಪಾಸಲ್ಲಿ ಮತ ಪಡೆದವರು. ಹೀಗಾಗಿ ಕಾಂತಾ ಅವರ ಮತಬ್ಯಾಂಕ್ ಮುಕ್ಕಾಗಿಲ್ಲ ಎನ್ನಬಹುದು.
ಈ ಬಾರಿ ಕೆಜೆಪಿಯಿಂದ ಕಣದಲ್ಲಿರುವುದರಿಂದ ಕಾಂತಾ ಅವರೂ ಪೈಪೋಟಿಯಲ್ಲಿದ್ದು ಸಹಜವಾಗಿಯೇ ಮತ ಬ್ಯಾಂಕ್ ಹಿಗ್ಗಿದೆ. ಕಾರ್ಮಿಕರು, ಮುಸ್ಲಿಂ ಬಾಂಧವರು, ಶೋಷಿತ ವರ್ಗದಲ್ಲಿ ಜನಪ್ರಿಯವಾಗಿರುವ ಕಾಂತಾ ಅವರಿಗೆ ಲಿಂಗಾಯತ ಸಮಾಜದ ಉತ್ತಮ ಬೆಂಬಲ ಕಂಡಿದ್ದರಿಂದ ಹಿಂದಿಗಿಂತಲೂ ಈ ಚುನಾವಣೆಯಲ್ಲಿ ಕಾಂತಾ ಪ್ರಬಲರಾಗಿ ಹೊರಹೊಮ್ಮಿದ್ದಾರೆ. ಮತ ವಿಭಜನೆ ವರವಾಗಿ ಕಾಂತಾ ಎಲ್ಲರ ಪಾಲಿನ ಆಯಸ್ಕಾಂತವಾದರೂ ಅಚ್ಚರಿ ಏನಿಲ್ಲ.
-ಶೇಷಮೂರ್ತಿ ಅವಧಾನಿ