ನೀರಿಗೆ ಬರ; ವಿದ್ಯಾರ್ಥಿಗಳ ಅಧ್ಯಯನಕ್ಕೆ ಗರ
ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.23
ಚಿತ್ತಾಪುರ ರಸ್ತೆಯಲ್ಲಿನ ಮೆಟ್ರಿಕ್ ನಂತರದ ಬಿಸಿಎಂ ಹಾಸ್ಟೆಲ್‌ನಲ್ಲಿ ಕಳೆದ ತಿಂಗಳಿಂದ ನೀರಿನ ಸಮಸ್ಯೆ ತೀವ್ರಗೊಂಡಿದ್ದು ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ವಸತಿ ನಿಲಯದಲ್ಲಿ ಸಮಸ್ಯೆಗಳ ಸರಮಾಲೆಯೇ ಇದ್ದು, ಈ ಬಗ್ಗೆ ಮೇಲ್ವಿಚಾರಕರಾಗಲಿ, ಅಧಿಕಾರಿಗಳಾಗಲಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬೇಸಿಗೆ ಸಮಯವಾಗಿದ್ದು, ವಸತಿ ನಿಯದಲ್ಲಿ ನೀರಿಲ್ಲದೇ ಪರದಾಡುವಂತಾಗಿದೆ. ಈ ಬಗ್ಗೆ ಅಧಿಕಾರಿಗಳ ಬಳಿ ಕೇಳಿದರೆ ಪಕ್ಕದ ಹಾಸ್ಟೆಲ್‌ಗೆ ಹೋಗಿ ಸ್ನಾನ ಮಾಡಿಕೊಂಡು ಬನ್ನಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿ, ಅಡುಗೆ ಪಾತ್ರೆಗಳನ್ನು ತಂದಿಟ್ಟು ಪ್ರತಿಭಟನೆ ನಡೆಸಿದರು.
ಅಧ್ಯಯನಕ್ಕೆ ತೊಂದರೆ: ಈ ವಸತಿ ನಿಲಯದಲ್ಲಿ ಸುಮಾರು 70 ವಿದ್ಯಾರ್ಥಿಗಳಿದ್ದು, ಕೆಲ ಅಂಗವಿಕಲ ವಿದ್ಯಾರ್ಥಿಗಳೂ ಇದ್ದಾರೆ. ರಾತ್ರಿ ಸಮಯದಲ್ಲಿ ಬೇರೆ ಹಾಸ್ಟೆಲ್‌ಗೆ ಹೋಗಿ ನೀರು ತಂದುಕೊಳ್ಳುವಂಥ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಮ್ಮ ಅಭ್ಯಾಸಕ್ಕೂ ತೊಂದರೆಯುಂಟಾಗುತ್ತಿದೆ ಎಂದು ಅಳಲು ತೋಡಿಕೊಂಡರು. ವಸತಿ ನಿಲಯದಲ್ಲಿನ ಬೋರ್‌ವೆಲ್ ಕೆಟ್ಟುಹೋದ ಪರಿಣಾಮ ಸಮಯಕ್ಕೆ ಸರಿಯಾಗಿ ಅಡುಗೆ ಮಾಡುತ್ತಿಲ್ಲ. ಕುಡಿವ ನೀರಿಗಾಗಿ ಮಿನರಲ್ ವಾಟರ್ ತರಲಾಗುತ್ತಿದೆ ಎಂದು ವಸತಿನಿಲಯದ ಮೇಲ್ವಿಚಾರಕರು ಹೇಳುತ್ತಾರೆ. ಆದರೆ ಪ್ರತಿದಿನ ಸ್ನಾನ, ಶೌಚಾಲಯ ಮತ್ತು ಬಟ್ಟೆ ತೊಳೆಯಲು ಹೀಗೆ ಪ್ರತಿಯೊಂದಕ್ಕೂ ಮಿನರಲ್ ವಾಟರ್ ಉಪಯೋಗಿಸಲಿಕ್ಕೆ ಆಗುವುದಿಲ್ಲ. ಹೀಗಾಗಿ ಶೀಘ್ರ ಬೊರ್‌ವೆಲ್ ದುರಸ್ತಿಗೊಳಿಸಿ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು.
ಶೌಚಾಲಯಗಳ ಸ್ಥಿತಿ ಅಧೋಗತಿಗೆ: ವಸತಿ ನಿಲಯದಲ್ಲಿ ಇರುವ 3 ಶೌಚಾಲಯಗಳು ನಿರ್ವಹಣೆ ಇಲ್ಲದೇ ದುರ್ವಾಸನೆ ಬೀರುತ್ತಿವೆ. ಶೌಚಾಲಯ ಸ್ವಚ್ಛಗೊಳಿಸಲು ನೀರಿಲ್ಲ. ಶೌಚಾಲಯದ ಪಕ್ಕದಲ್ಲಿಯೇ ಅಡುಗೆ ತಯಾರಿಸಲಾಗುತ್ತಿದೆ. ಅಲ್ಲೇ ಊಟವನ್ನೂ ಮಾಡುವ ಪರಿಸ್ಥಿತಿಯಿದೆ. ಆದ್ದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಿಸುತ್ತಿದ್ದೇವೆ. ಉನ್ನತ ವ್ಯಾಸಂಗಕ್ಕಾಗಿ ದೂರದ ಊರುಗಳಿಂದ ಬರುವ ನಮ್ಮಂತಹ ಬಡ ವಿದ್ಯಾರ್ಥಿಗಳ ಮನವಿಗೆ ಅಧಿಕಾರಿಗಳು ಸ್ಪಂದಿಸದಿರುವುದರಿಂದ ಸರ್ಕಾರ ನೀಡುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಅಲ್ಲದೇ ಅಭ್ಯಾಸಕ್ಕೂ ತೊಡಕುಂಟಾಗಿದೆ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ.
ಪ್ರತಿಭಟನೆ ಎಚ್ಚರಿಕೆ: ಈ ಬಗ್ಗೆ ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನವಾಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿ ನೀರಿನ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಡಿಸಿ ಕಚೇರಿ ಎದರು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳಾದ ಭೀಮಶಪ್ಪ, ಚಾಂದಪಾಷಾ, ಪ್ರಭು, ಕೃಷ್ಣ, ಚಂದ್ರಕಾಂತ ಇತರರು ಆಗ್ರಹಿಸಿದ್ದಾರೆ.