ಬಹಿಷ್ಕಾರಕ್ಕೆ ನಿರ್ಧಾರ
ಗುಲ್ಬರ್ಗ: ಮಹಾನಗರ ಪಾಲಿಕೆಯ ವಾರ್ಡ್ ನಂ.18ರಲ್ಲಿ ಬರುವ ಬಡಾವಣೆಗಳು ಮೂಲ ಸೌಲಭ್ಯಗಳಿಂದ ವಂಚಿತಗೊಂಡಿರುವುದರಿಂದ ಇಲ್ಲಿನ ನಾಗರಿಕರು ಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ವಿಜಯನಗರ ಬಡಾವಣೆಯಲ್ಲಿ ಎರಡು ವರ್ಷಗಳಿಂದ ಕುಡಿಯುವ ನೀರಿನ ಮುಖ್ಯ ಪೈಪ್ ಒಡೆದು ನೀರು ಪೋಲಾಗುತ್ತಿದೆ. ಅಲ್ಲದೇ ಒಡೆದ ಪೈಪಿನಲ್ಲಿ ಹೊಲಸು ಸೇರಿ ಅಶುದ್ಧ ನೀರು ಸರಬರಾಜು ಆಗುತ್ತಿದೆ. ಇದರಿಂದ ಬಡಾವಣೆಯ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಜಯ ಕರ್ನಾಟಕ ಜಿಲ್ಲಾ ಮಲ್ಲಿಕಾರ್ಜುನ ಮತ್ತು ಅನಿಕೇತನ ಮಾಲಿಪಾಟೀಲ್ ತಿಳಿಸಿದ್ದಾರೆ.
ಅಭಿಯಾನ ಇಂದು
ಗುಲ್ಬರ್ಗ: ಜಿಲ್ಲಾ ಸ್ವೀಪ್ ಸಮಿತಿಯಿಂದ ಮಹಿಳಾ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ನಗರದಲ್ಲಿ ಏ.24ರಂದು ಹಮ್ಮಿಕೊಳ್ಳಲಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷೆ ಪಲ್ಲವಿ ಆಕುರಾತಿ ತಿಳಿಸಿದ್ದಾರೆ. ಕಾರ್ಯಕ್ರಮದ ನಿಮಿತ್ತ ಏ.24 ರಂದು ಬೆ.9 ಗಂಟೆಗೆ ನಗರದ ನಗರೇಶ್ವರ ಶಾಲೆಯಿಂದ, ಶರಣಬಸವೇಶ್ವರ ದೇವಾಲಯ ಆವರಣದಿಂದ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಮತ್ತು ಜಗತ್ ವೃತ್ತದಿಂದ ಆರಂಭವಾಗುವ ಮಹಿಳೆಯರ ಮೆರವಣಿಗೆ ಜಾಥಾಗಳು 11 ಗಂಟೆಗೆ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸೇರುವವು. ಸರ್ದಾರ್ ಪಟೇಲ್ ಮತ್ತು ಜಗತ್ ವೃತ್ತಗಳಲ್ಲಿ ಮಹಿಳೆಯರಿಂದ ಮಾನವ ಸರಪಳಿ ಹಾಗೂ ಮತದಾರರ ಸಹಿ ಸಂಗ್ರಹ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ. ನಂತರ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ಅಧೀಕ್ಷಕರು ಪಾಲ್ಗೊಂಡು ಮತದಾನ ಹಕ್ಕಿನ ಬಗ್ಗೆ ತಿಳಿವಳಿಕೆ ನೀಡುವರು. ಪುಟಾಣಿ ಮಕ್ಕಳಿಂದ ಹಾಗೂ ಕಲಾ ತಂಡಗಳಿಂದ ಬೀದಿ ನಾಟಕ ಪ್ರದರ್ಶನ ಹಾಗೂ ಮಹಿಳೆಯರಿಂದ ಭಾಷಣ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.
ನಾಳೆ ಬೀದಿ ನಾಟಕ
ಗುಲ್ಬರ್ಗ: ಮತದಾರರಲ್ಲಿ ಮತದಾನ ಹಕ್ಕಿನ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯ ಆಯ್ದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮೇ 1ರವರೆಗೆ ಬೀದಿ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಭುಲಿಂಗ ಕಿಣಗಿ, ಶಾಂತಯ್ಯ ಮಠಪತಿ ಮತ್ತು ರೇಣುಕಾ ನೇತೃತ್ವದ ತಂಡಗಳು ಪ್ರತಿದಿನ ಮೂರು ಗ್ರಾಮ/ನಗರ ಪ್ರದೇಶಗಳಲ್ಲಿ ಬೆಳಗ್ಗೆ 9 ಗಂಟೆಗೆ, ಮಧ್ಯಾಹ್ನ 3 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಕಾರ್ಯಕ್ರಮ ನೀಡಲಿವೆ. ಪ್ರಭುಲಿಂಗ ಕಿಣಗಿ ತಂಡ- ಗುಲ್ಬರ್ಗ ಗ್ರಾಮೀಣ(ಎಸ್‌ಸಿ) ಮತಕ್ಷೇತ್ರ- ಓಕಳಿ, ಕಲಮೂಡ ಮತ್ತು ಹೊಳಕುಂದಾ. ಶಾಂತಯ್ಯ ಮಠಪತಿ ತಂಡ-ಚಿತ್ತಾಪುರ ಮತಕ್ಷೇತ್ರ- ಕುಂಬಾರಹಳ್ಳಿ, ಡಿ.ಎನ್. ತಾಂಡಾ ಮತ್ತು ಯಾಗಾಪುರ. ರೇಣುಕಾ ತಂಡ- ಚಿಂಚೋಳಿ ಮತಕ್ಷೇತ್ರ- ವೆಂಕಟಾಪುರ, ಶಾದಿಪುರ ಮತ್ತು ಸಲಗರ ಬಸಂತಪುರ.