ಬೆನ್ನಿಗೆ ಚೂರಿ ಹಾಕುವ ಗುಂಪಿನಲ್ಲಿ ನಿವ್ಯಾಕೆ ಸೇರಿದ್ರಿ?
ಗುಲ್ಬರ್ಗ: ಆಡಳಿತಾರೂಢ ಬಿಜೆಪಿ ಹಾಗೂ ಬಿಎಸ್‌ವೈ ನೇತೃತ್ವದ ಕೆಜೆಪಿ ನಡುವಿನ 'ಬೆನ್ನಿಗೆ ಹಾಕುವ ಚೂರಿ ಸಮರ' ಹಾಗೇ ಮುಂದುವರಿದಿದೆ. ಗುಲ್ಬರ್ಗದಲ್ಲಿ ಮಂಗಳವಾರ ಪ್ರವಾಸ ಕೈಗೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು ಸಿಎಂ ಶೆಟ್ಟರ್ ಅವರ ಚೂರಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಮಾಡಿ. ಪ್ರತಿಪಕ್ಷ ನಾಯಕರನ್ನಾಗಿ ಮಾಡಿದೆ. ಇಷ್ಟೆಲ್ಲ ಮಾಡಿದರೂ ನೀವ್ಯಾಕೆ ಈ ಯಡಿಯೂರಪ್ಪ ಬೆನ್ನಿಗೆ ಚೂರಿ ಹಾಕುವ ಗುಂಪಿನಲ್ಲಿ ಪ್ರಮುಖರಾಗಿ ಹೊರಹೊಮ್ಮಿದಿರಿ ಎಂದು ಯಡಿಯೂರಪ್ಪ ಜಗದೀಶ ಶಟ್ಟರ್ ಅವರಿಗೆ ಸವಾಲ್ ಹಾಕಿದ್ದಾರೆ. ಶೆಟ್ಟರ್ ಗುಲ್ಬರ್ಗ ಪ್ರಚಾರ ಸಭೆಗಳಲ್ಲಿ ನೀಡಿದ್ದ ಹೇಳಿಕೆಗಳನ್ನು ಹದ್ದು ಮೀರಿದ ಮಾತುಗಳೆಂದು ಬಣ್ಣಿಸಿದ ಯಡಿಯೂರಪ್ಪ, 'ಈ ಚುನಾವಣೆಯಲ್ಲಿ ಬಿಜೆಪಿಗೆ 40 ಸ್ಥಾನ ಬರೋದಿಲ್ಲ. ಇದ್ಯಾವುದರ ಪರಿವಿಲ್ಲದೆ ಮಾತನಾಡುತ್ತಿದ್ದಾರೆ. ಇಂಥ ಮಾತುಗಳಿಗೆ ಮೇ 8 ರಂದು ಜನರೇ ಉತ್ತರ ನೀಡುತ್ತಾರೆ' ಎಂದರು.
ಧನಂಜಯ್ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ: ಧನಂಜಯಕುಮಾರ್ ಆಡ್ವಾಣಿ ವಿರುದ್ಧ ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ. ಆ ಬಗ್ಗೆ ನಾನು ನೊಂದು ಕ್ಷಮೆ ಕೇಳಿದ್ದೇನೆ. ಆಡ್ವಾಣಿಯಂಥ ದೊಡ್ಡವರ ಬಗ್ಗೆ ನಾವು ಹೇಳಿಕೆ ಕೊಡುವಷ್ಟು ದೊಡ್ಡವರಾಗಿಲ್ಲ ಎಂದರು.