'ಎಚ್ಡಿಕೆ ಸಾಧನೆ ಜೆಡಿಎಸ್ನ ಗೆಲವು'
ಗುಲ್ಬರ್ಗ/ಶಹಾಬಾದ್: ಐದು ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರು, ಅಸ್ಥಿರತೆ ಮೂಡಿದೆ, ಬಿಜೆಪಿ ಒಳಜಗಳದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ, ಬಿಜೆಪಿ, ಕಾಂಗ್ರೆಸ್ ನೋಡಿದ ರಾಜ್ಯದ ಜನತೆ ಕೇವಲ 18 ತಿಂಗಳ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಆಡಳಿತದ ಸಾಧನೆ ಪಕ್ಷದ ಗೆಲವಿಗೆ ಕಾರಣವಾಗಲಿದೆ ಎಂದು ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಜಿ. ಸಾಗರ, ಗ್ರಾಮೀಣ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಬಸವರಾಜ ಬೀರಬಟ್ಟಿ ಹೇಳಿದರು.
ಜನಪರ ಯೋಜನೆಗಳು: ಪಕ್ಷದ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಚ್ಡಿಕೆಯವರ ಅವಧಿಯಲ್ಲಿ ರೈತರ ಸಾಲ ಮನ್ನಾ, ವೃದ್ಯಾಪ್ಯ, ವಿಧವಾ, ಅಂಗವಿಕಲರ ಪಿಂಚಣಿ ಹೆಚ್ಚಳ, ಪಜಾ, ಪಪಂಗಳಿಗೆ ಶಿಷ್ಯವೇತನ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಕುಮಾರಸ್ವಾಮಿಯವರಿಗೆ ಸಲ್ಲುತ್ತದೆ ಎಂದರು.
ಪ್ರಣಾಳಿಕೆಯಲ್ಲಿ ಆಶ್ವಾಸನೆ: ಈ ಬಾರಿ ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದು 48 ಗಂಟೆಯಲ್ಲಿ ರೈತರ ಸಾಲ ಮನ್ನಾ, ಪ್ರತಿ ದೊಡ್ಡ ಗ್ರಾಮಗಳಲ್ಲಿ ಸರ್ಕಾರಿ ಕ್ಲಿನಿಕ್ ಸ್ಥಾಪನೆ, ಪಟ್ಟಣ ಪ್ರದೇಶದಲ್ಲಿ ಹೃದಯ ರೋಗ ಆಸ್ಪತ್ರೆ ಸೇರಿದಂತೆ ಅನೇಕ ಜನಪರ, ರೈತರ, ಕಡುಬಡವರ ಪರ ಯೋಜನೆಗಳನ್ನು ಜಾರಿಗೊಳಿಸುವ ಕುರಿತು ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಲಾಗಿದೆ ಎಂದು ಹೇಳಿದರು.