ಕಾಂಗ್ರೆಸ್ಸಿಗೆ ರಾಜ್ಯದಲ್ಲಿ ಭವಿಷ್ಯವಿಲ್ಲ: ಮಲ್ಕಾಪುರೆ
ಸುರಪುರ: ಕೇಂದ್ರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅನೇಕ ಹಗರಣ, ಭ್ರಷ್ಟಾಚಾರ ಆರೋಪ ಹೊತ್ತಿದೆ. ಅಡುಗೆ ಅನಿಲ ಮತ್ತು ಇತರೆ ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿದ್ದು, ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ರಾಜ್ಯದ ಜನತೆ ಕಾಂಗ್ರೆಸ್ಗೆ ಈ ಬಾರಿ ಮತ ಹಾಕುವುದಿಲ್ಲ. ಕಾಂಗ್ರೆಸ್ಗೆ ರಾಜ್ಯದಲ್ಲಿ ಭವಿಷ್ಯವಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥ ಮಲ್ಕಾಪುರೆ ಹೇಳಿದರು.
ಇಲ್ಲಿಯ ಬಿಜೆಪಿ ಅಭ್ಯರ್ಥಿ ರಾಜಾ ಮದನಗೋಪಾಲ ನಾಯಕ ಪರ ಪ್ರಚಾರ ನಡೆಸಿದ ನಂತರ ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹೈ-ಕ ಭಾಗ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿಯಲು ಈ ಭಾಗದಲ್ಲಿ 40 ವರ್ಷಗಳಿಂದ ಅಧಿಕಾರದಲ್ಲಿರುವ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆಯವರೇ ಕಾರಣ. ಇವರು ರಾಜ್ಯದಲ್ಲಿ ಎಲ್ಲಾ ಹಂತದ ಅಧಿಕಾರ ಪಡೆದರು. ಆದರೆ ಈ ಭಾಗವನ್ನು ಅಭಿವೃದ್ಧಿ ಮಾಡಲಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಿದೆ. 371ನೇ ವಿಧಿ ಜಾರಿಗೆ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳಿಸಿಕೊಟ್ಟು ಆಡ್ವಾಣಿ, ಸುಷ್ಮಾ ಸ್ವರಾಜ್, ಅರುಣ ಜೇಟ್ಲಿಯವರಿಗೆ ಮನವರಿಕೆ ಮಾಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿಸಿ ಸಂಸತ್ತಿನ ಎರಡು ಸದನಗಳಲ್ಲಿ ಅನುಮೋದನೆ ಪಡೆಯಲು ಬಿಜೆಪಿ ಶ್ರಮಿಸಿದೆ ಎಂದು ಸ್ಪಷ್ಟಪಡಿಸಿದರು.
ಸನ್ಮಾನ- ಸತ್ಕಾರ ನಾಚಿಕೆಗೇಡಿನ ಪ್ರಸಂಗ: ಕೇಂದ್ರ ಮತ್ತು ರಾಜ್ಯದಲ್ಲಿ ಬಹುತೇಕ ಪಾಲು ಕಾಂಗ್ರೆಸ್ ಆಡಳಿತ ನಡೆಸಿದೆ. ಆ ಸಂದರ್ಭದಲ್ಲಿ ಯಾಕೆ ಸಂವಿಧಾನ ತಿದ್ದುಪಡಿ ಮಾಡಿ ಕಾಯ್ದೆ ಜಾರಿ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿ ಹೋರಾಟದ ಫಲವಾಗಿ 371ನೇ ವಿಧಿ ಜಾರಿಯಾಗಿದೆಯೇ ಹೊರತು ಇದಕ್ಕೆ ಖರ್ಗೆ, ಧರ್ಮಸಿಂಗ್ರ ಯಾವುದೇ ಕೊಡುಗೆ ಇಲ್ಲ. ಆದರೆ ಇದರ ರೂವಾರಿಗಳು ನಾವೇ ಎಂದು ಹೇಳಿ ಜನರಲ್ಲಿ ತಪ್ಪು ಭಾವನೆ ಮೂಡಿಸಿ ಸನ್ಮಾನ- ಸತ್ಕಾರ ಮಾಡಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಪ್ರಸಂಗ ಎಂದು ಹರಿಯಾಯ್ದರು.
ಅಭ್ಯರ್ಥಿ ರಾಜಾ ಮದನಗೋಪಾಲ ನಾಯಕ, ಪಕ್ಷದ ತಾಲೂಕು ಅಧ್ಯಕ್ಷ ಮಲ್ಲೇಶಿ ಪಾಟೀಲ, ಮುಖಂಡರಾದ ವೇಣುಗೋಪಾಲ ಜೇವರ್ಗಿ, ಬಸವರಾಜ ಜಡಿಮರಳ, ರಾಜಾ ಮುಕುಂದ ನಾಯಕ, ರಮೇಶ ಶೆಟ್ಟಿ, ಗುರುಕಾಮಾ, ಕೃಷ್ಣರಾಜ ಏವೂರ, ಲಕ್ಷ್ಮಣ ಗುತ್ತೇದಾರ ಇತರರು ಇದ್ದರು.
ಮತಕ್ಷೇತ್ರದ ಅಭಿವೃದ್ಧಿಗಾಗಿ ಕಣಕ್ಕೆ: ಮಾಗನೂರ
ಯಾದಗಿರಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಜನಪರ ಸಾಧನೆಗಳೇ ನನ್ನ ಗೆಲವಿಗೆ ಕಾರಣವಾಗಲಿದೆ. ಕ್ಷೇತ್ರದ ಜನರಿಗೆ ಮೂಲ ಸೌಕರ್ಯ್ನಒದಗಿಸುವ ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಚಂದ್ರಶೇಖರಗೌಡ ಮಾಗನೂರ ಮನವಿ ಮಾಡಿದರು.
ಅಬ್ಬೆತುಮಕೂರು, ಠಾಣಗುಂದಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ನೀರಾವರಿ ಸೌಕರ್ಯವಿಲ್ಲದೆ ರೈತರು ಉದ್ಯೋಗ ಅರಸಿ ಗುಳೆ ಹೋಗುತ್ತಿರುವುದು ಪ್ರಮುಖ ಸಮಸ್ಯೆ. ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಯುವಕರ ತಂಡ ಹಾಗೂ ಎಲ್ಲ ವರ್ಗದ ಜನತೆ ಬದಲಾವಣೆಗಾಗಿ ಬಿಜೆಪಿ ಬೆಂಬಲಿಸುತ್ತಿರುವುದರಿಂದ ನನಗೆ ಹೆಚ್ಚಿನ ಶಕ್ತಿ ಬಂದಿದೆ. ಗೆಲವಿಗಾಗಿ ಎಲ್ಲರ ಸಲಹೆ ಸೂಚನೆ ಪಡೆಯುತ್ತಿದ್ದೇನೆ. ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳುವುದರಲ್ಲಿ ಸಂಶಯವಿಲ್ಲ ಎಂದರು. ಜಿಪಂ ಸದಸ್ಯ ಬಸವರಾಜ ಖಂಡ್ರೆ ಮಾತನಾಡಿದರು.