ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗುಲ್ಬರ್ಗ ಗ್ರಾಮೀಣ ಯಾರಿಗೆ ಮೀಸಲಣ್ಣ?

Lingaraj Badiger
Updated On : 25 Apr 2013, 10:59 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.24
ಹಿಂದಿನ ಎಲೆಕ್ಷನ್‌ದ್ಹಂಗ ಈ ಎಲೆಕ್ಷನ್ ಅಲ್ಲ ಬಿಡ್ರಿ, ನಮೂನಿ ನಮೂನಿನೇ ಹೊಂಟದ್ರಿ ಗಾಳಿ...
- ಆಳಂದದ ನರೋಣಾ ಸರ್ಕಲ್, ಗುಲ್ಬರ್ಗದ ಅವರಾದ, ಮಹಾಗಾಂವ್, ಕಮಲಾಪುರ ಸರ್ಕಲ್, ಚಿತ್ತಾಪುರದ ಶಹಾಬಾದ್ ಸರ್ಕಲ್, ಗುಲ್ಬರ್ಗ ಸರ್ಕಲ್ ವ್ಯಾಪ್ತಿಯ ಗ್ರಾಮೀಣ ಮೀಸಲು ಕ್ಷೇತ್ರದಲ್ಲಿ ಕೇಳಿ ಬರುವ ಮಾತುಗಳಿವು.
ಮೇಲ್ನೋಟಕ್ಕೆ ಈ ಬಾರಿಯ ಗ್ರಾಮೀಣ(ಎಸ್ಸಿ ಮೀಸಲು) ಚುನಾವಣೆ ಸರಳ ಎಂದು ಕಂಡರೂ ಜಾತಿ- ಕೋಮಿನ ಆಧಾರದ ಮತಗಳ ವಿಭಜನೆ, ಅಭ್ಯರ್ಥಿವಾರು ವ್ಯಕ್ತಿ ಪ್ರತಿಷ್ಠೆ, ಹೋರಾಟಗಳ ಹಿನ್ನೆಲೆ, ಅಭಿವೃದ್ಧಿ ಚಿಂತನೆ ಇವೆಲ್ಲವುಗಳ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಈ ಕಣದಲ್ಲಿ ಮತದಾರ ಯಾರು ಹಿತವರು ಈ ಐವರೊಳಗೆ ಎಂದು ಲೆಕ್ಕಾಚಾರಕ್ಕೆ ಮುಂದಾದಂತಿದೆ. ಅಷ್ಟೇ ಅಲ್ಲ, ತನ್ನ ಮಹತ್ವದ ಮತವನ್ನು ತುಂಬ ಎಚ್ಚರಿಕೆಯಿಂದ ಹಾಗೂ ಎಲ್ಲ ಮಗ್ಗುಲದಿಂದ ಅಳೆದು ಸುರಿದು ದಾನ ಮಾಡಲು ನಿರ್ಧರಿಸಿದಂತಿದೆ.   ಸತತ 5 ಬಾರಿ ಗೆದ್ದು 6ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಕುಸ್ತಿಪಟು, ಮಾಜಿ ಮಂತ್ರಿ ರೇವು ನಾಯಕ ಬೆಳಮಗಿ(ಬಿಜೆಪಿ), ಮಾಜಿ ವೈದ್ಯಕೀಯ ಸಚಿವ ಜಿ.ರಾಮಕೃಷ್ಣ(ಕಾಂಗ್ರೆಸ್), ಮಾಜಿ ಸಚಿವ ಬಾಬೂರಾವ ಚವ್ಹಾಣ್(ಕೆಜೆಪಿ), ದಲಿತ ಸಮುದಾಯದ ಹೋರಾಟಗಾರ ಡಾ. ಡಿ.ಜಿ. ಸಾಗರ್, ರೈತಪರ ಚಿಂತಕ ಮಾರುತಿ ಮಾನ್ಪಡೆ, ಬಿಎಸ್ಸಾರ್ ಕಾಂಗ್ರೆಸ್‌ನ ಬಾಬು ಹೊನ್ನಾನಾಯಕ ಸೇರಿದಂತೆ 15 ಮಂದಿ ಕಣವಾದ ಇಲ್ಲೀಗ ಚುನಾವಣೆ ರಂಗೇರಿದೆ.
ಹಿಂದೊಮ್ಮೆ ಕ್ಷೇತ್ರ ಜನರ ಬಗ್ಗೆ ಹಗುರ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದ ರೇವು ನಾಯಕ ಈ ಬಾರಿ ಆಗಿದ್ದೆಲ್ಲ ಮರೀರಿ, ಮತಹಾಕಿ ಆರ್ಸಿ ಕಳಿಸ್ರಿ ಎಂದು ಮತದಾರರ ಮನೆಬಾಗಿಲು ಬಡಿಯುತ್ತಿದ್ದರೆ, ರಾಮಕೃಷ್ಣ ಇದೊಂದು ಬಾರಿ ಅವಕಾಶ ಕೊಡ್ರಿ ಎಂದು ಕೋರಿಕೊಳ್ಳುತ್ತಿದ್ದಾರೆ.   ಚಿಂಚೋಳಿಯಲ್ಲಿ ಕೈ ಟಿಕೆಟ್ ತಪ್ಪಿದ್ದರಿಂದ ಕೆಜೆಪಿಗೆ ಹಾರಿಬಂದ ವಲಸೆ ಹಕ್ಕಿ ಬಾಬೂರಾವ ಚವ್ಹಾಣ್ ತೆಂಗಿನ ಹೆಚ್ಚು ಇಳುವರಿ ತೆಗೆಯುವ ಹುನ್ನಾರದಲ್ಲಿದ್ದರೆ, ಹೋರಾಟಗಾರ ಸಾಗರ ಕುಮಾರಣ್ಣನ ಸಾಧನೆಗಳೇ ತಮ್ಮ ಗೆಲವಿನ ಶ್ರೀರಕ್ಷೆ ಎಂದು ನಂಬಿದ್ದಾರೆ.
 ಸತತ ಸೋಲುಂಡರೂ ಛಲ ಬಿಡದೆ 6ನೇ ಬಾರಿ ಕಣದಲ್ಲಿರುವ ಸಿಪಿಎಂ ಮುಖಂಡ ಮಾರುತಿ ಮಾನ್ಪಡೆ ಮತದಾರರ ಮನ-ಗಮನ ಗೆಲ್ಲುವುದಕ್ಕೆ ಹಿಂದಿಗಿಂತಲೂ ಗಂಭೀರರಾಗಿದ್ದಾರೆ.
ಬದಲಾಯಯ್ತು ಕಣ: ಕ್ಷೇತ್ರದ ಜೀವನದಿ ಬೆಣ್ಣೆತೊರಾದಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಹಾಗೆಯೇ ರಾಜಕೀಯದಲ್ಲಿ ಬದಲಾವಣೆ ಗಾಳಿ ಬೀಸಲಾರಂಭಿಸಿದೆ.   ಕಮಲಾಪುರ, ಮಹಾಗಾಂವ್ ತಾಲೂಕು ಕೇಂದ್ರ ಹೊಂದುವ ಪೈಪೋಟಿಯಲ್ಲಿ ದೂರ ಉಳಿದ ಸಂಗತಿ, ಕುರಿಕೋಟಾ ಸೇತುವೆ ಕುಸಿತ ಕಂಡು ಜನ ಹೈರಾಣದ ವಿಚಾರ, ಆಂತರಿಕ ರಸ್ತೆಗಳಿಲ್ಲದ ಈ ಕ್ಷೇತ್ರದ ಹಳ್ಳಿ ಮಂದಿ ಪರೇಶಾನಿ, ಕುಡಿವ ನೀರಿಗೂ ಬರ ಬಿದ್ದಿರುವ ಬಬಲಾದ ಸೇರಿದಂತೆ ಹಲವು ಗ್ರಾಮಗಳ ಜನರ ಖಾಲಿ ಕೊಡ ಯಾತ್ರೆಗಳೆಲ್ಲವೂ ಈ ಚುನಾವಣೆಯಲ್ಲಿ ತಮ್ಮ ಕೊಡುಗೆ ನೀಡವುದು ನಿಶ್ಚಿತ.
ಪಟ್ಟು ಬದಲಿಸುವರೆ ಕುಸ್ತಿಪಟು: ಬಿಜೆಪಿ ಹುರಿಯಾಳಾಗಿ ಕಣದಲ್ಲಿರುವ ಬೆಳಮಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು. ಹೀಗಾಗಿ ಜನರ ಸಂಕಷ್ಟಗಳಿಗೆ ಮದ್ದೇಕೆ ಅರೆಯಲಾಗಲಿಲ್ಲ ಎಂಬ ಪ್ರಶ್ನೆಗೆ ಇವರ ಉತ್ತರ ಅಸ್ಪಷ್ಟ. 'ನಾನೇನು ಓದಿ ಬರೆದವನಲ್ಲ. ನಿಮ್ಮ ಉಡ್ಯಾಗ ಬಿದ್ದೀನಿ, ಕಾಯೋದು, ಬಿಡೋದು ನಿಮ್ಮ ಕೈಯ್ಯಾಗಿನ ಮಾತದ...' ಎಂದು ಹಳ್ಳಿಮಂದಿಯಂತೆ ಮಾತನಾಡುತ್ತ ಇದನ್ನೇ ತಮ್ಮ ಚುನಾವಣಾ ಪ್ರಚಾರದಲ್ಲಿ ಜನರ ಗಮನ ಸೆಳೆಯಲು ಸಮರ್ಥವಾಗಿ ಬಳಸಿಕೊಳ್ಳುವ ಬೆಳಮಗಿ 5 ಬಾರಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದು ಇದೇ ಕಾರಣಕ್ಕಾಗಿ ಎಂದರೆ ಅತಿಶಯೋಕ್ತಿಯೇನಲ್ಲ. ಈ ಬಾರಿ ಲಂಬಾಣಿ ಸಮುದಾಯವರೂ ಕಣದಲ್ಲಿದ್ದಾರೆ. ಹೀಗಾಗಿ ಈ ಚುನಾವಣೆ ಬೆಳಮಗಿಗೆ ತುಸು ಹೈರಾಣ ಎಂಬಂತಾಗಿದೆ.   ಪ್ರತಿಕೂಲ ಪರಿಸ್ಥಿತಿಯಲ್ಲೂ ಯಶ ಕಾಣುವ ಪಟ್ಟು ಹುಡುಕುವುದರಲ್ಲಿ ನಿಸ್ಸೀಮರು. ಆ ಕಲೆ ಪ್ರದರ್ಶಿಸಲು ಈಗ ಸಕಾಲ ಎನ್ನುತ್ತಿದ್ದಾರೆ ಜನ.
ಚಾಲ್ ಬದಲಿಸಿದ ಚವ್ಹಾಣ್: ಕಾಂಗ್ರೆಸ್ ಬಿಟ್ಟು ಕೆಜೆಪಿಗೆ ಬಂದ ಮಾಜಿ ಸಚಿವ ಬಾಬೂರಾವ ಚವ್ಹಾಣ್‌ರು ರೇವು ನಾಯಕರಿಗೆ ಪ್ರಬಲ ಪೈಪೋಟಿ ಒಡ್ಡಿರುವುದು ಸ್ಪಷ್ಟ. ಮೇಲ್ವರ್ಗದ ಹೆಚ್ಚಿನ ಮತದಾರರು ತಮ್ಮೊಂದಿಗೆ ಕಿರಿಕಿರಿ ಮಾಡಿಕೊಳ್ಳದೆ ಹೊಂದಿಕೊಂಡು ಹೋಗುವ ಸೌಮ್ಯರಿಗೆ ಮಣೆ ಹಾಕುತ್ತ ಬಂದಿದ್ದು ಹಿಂದಿನ ಚುನಾವಣೆ ಫಲಿತಾಂಶಗಳಿಂದ ದಿಟವಾಗಿದೆ.   ಮೇಲ್ವರ್ಗದವರ ಮತ ಇವರಿಬ್ಬರಲ್ಲಿ ಹಂಚಿಹೋಗುವುದು ನಿಶ್ಚಿತ. ಇನ್ನು ಲಂಬಾಣಿ, ಶೋಷಿತ ಸಮಾಜ, ಇತರೆ ಹಿಂದುಳಿದ ವರ್ಗಗಳ ಮತಗಳಲ್ಲಿ ಯಾರು ಹೆಚ್ಚಿಗೆ ಪಡೆಯುವರೋ ಅವರ ಹಣೆಬರಹ ಇಲ್ಲಿ ಅರಳುತ್ತದೆ.
ಬದಲಾದರೆ ರಾಮಕೃಷ್ಣ: ಪುನರ್ವಿಂಗಡಣೆಗೂ ಮುನ್ನ ಕಮಲಾಪುರ ಕ್ಷೇತ್ರದಿಂದ ಗೆದ್ದು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಜಿ.ರಾಮಕೃಷ್ಣ ಪುನರ್ವಿಂಗಡಣೆ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಹುರಿಯಾಳಾಗಿ ಕಣಕ್ಕಿಳಿದ್ದಾರೆ.    ಪರಿಶಿಷ್ಟ ಜಾತಿ ಸಮುದಾಯದ ಎಡ-ಬಲ ಗುಂಪಿನ ರಾಜಕೀಯ ಇವರ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದರೂ ಈ ಬಾರಿ ಮೇಲ್ವರ್ಗದ ಹೆಚ್ಚಿನ ಒಲವು ಸಂಪಾದನೆಗೆ ಮುಂದಾಗಿರುವುದು ವಿಶೇಷ.
ಜಾತಿ- ಕೋಮಿನ ರಾಜಕೀಯ ದಾಳ ಉರುಳಿದರೂ ಮೇಲ್ವರ್ಗದ ಮತಗಳು ಸಿಗದಿದ್ದಲ್ಲಿ ಗೆಲವು ಕಬ್ಬಿಣದ ಕಡಲೆ ಎಂಬುದು ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ. ಈ ಬಾರಿ ಸ್ಪರ್ಧಿಸಿರುವ ಅಭ್ಯರ್ಥಿಗಳೆಲ್ಲರೂ ತಮ್ಮ ನಡಾವಳಿ- ಧೋರಣೆ ಬದಲಿಸುವಂತಾಗಿದೆ.
'ಸಾಗರ'ಕ್ಕೆ ಸ್ಪಂದಿಸುವನೇ ಮತದಾರ?: ಮೂರು ದಶಕಗಳ ಕಾಲ ದಲಿತಪರ ಹೋರಾಟಗಳಲ್ಲಿ ತೊಡಗಿರುವ ಡಿ.ಜಿ. ಸಾಗರ ಇದೇ ಮೊದಲ ಬಾರಿ ಜೆಡಿಎಸ್‌ನಿಂದ ಅಖಾಡಕ್ಕಿಳಿದಿದ್ದಾರೆ. ತಮ್ಮ ಸಮಾಜ ಕಟ್ಟುವ ಕೆಲಸಗಳೊಂದಿಗೆ ಎಚ್ಡಿಕೆಯವರ ಜನಪರ ಆಡಳಿತದ ಅಂಶಗಳನ್ನೇ ಕ್ಷೇತ್ರಾದ್ಯಂತ ಪ್ರಸ್ತಾಪಿಸುತ್ತ ಮತ ಕೇಳುತ್ತಿದ್ದಾರೆ.   ಹೋರಾಟದ ಸಾಗರಕ್ಕೆ ಮತದಾರ ಅದ್ಹೇಗೆ ಸ್ಪಂದಿಸುವನೋ ಕಾದು ನೋಡಬೇಕಷ್ಟೆ.
ಸಿಪಿಎಂ 'ಮಾಮಾ' ಗೆಲ್ಲುವರೇ?: ಹೋರಾಟಗಳ ಹಿನ್ನೆಲೆಯಲ್ಲಿ 10 ಸಾವಿರ ಮತಗಳಿಗೆ ಕೊರತೆ ಇಲ್ಲದಂತೆ ಕ್ಷೇತ್ರದಲ್ಲಿ ತಮ್ಮ ಹಿಡಿತ ಹೊಂದಿರುವ ಮಾರುತಿ ಮಾನ್ಪಡೆ ಈ ಬಾರಿ 6ನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ತಮ್ಮ ವರ್ಚಸ್ಸು ವೃದ್ಧಿಸಿದ್ದರಿಂದ ಮತದಾರ ಮನಸ್ಸು ಮಾಡಿದಲ್ಲಿ ವಿಜಯಲಕ್ಷ್ಮೀ ತಮ್ಮ ಕೈ ಹಿಡಿಯುವ ಗಳಿಗೆ ದೂರವಿಲ್ಲ ಎನ್ನುತ್ತಿದ್ದಾರೆ.   ಲಂಬಾಣಿ ಸಮುದಾಯದ ಬಾಬು ಹೊನ್ನಾನಾಯಕ ಬಿಎಸ್ಸಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು ಇವರ ಫ್ಯಾನ್ ಗಾಳಿಗೆ ಅದೆಷ್ಟು ಮಂದಿ ಮೈ ಒಡ್ಡುವರೋ ಎಂಬುದು ಕಣದಲ್ಲಿ ಮಹತ್ವದ್ದಾಗಲಿದೆ.ರೇವು ನಾಯಕ, ಬಾಬುರಾವ ಚವ್ಹಾಣ್, ಬಾಬು ಹೊನ್ನಾ ನಾಯಕ ಲಂಬಾಣಿ ಸಮುದಾಯದವರು. ಈ ಮತಗಳು ಹರಿದು ಹಂಚಿ ಹೋಗುತ್ತವೆ. ಡಿಜಿ ಸಾಗರ, ಮಾರುತಿ ಮಾನ್ಪಡೆ ಶೋಷಿತ ಸಮುದಾಯದ ಬಲ ಗುಂಪು, ಇನ್ನಿಯೂ ಮತ ವಿಭಜನೆ ನಿಶ್ಚಿತ.   ಕೈ ಪಾಳಯದ ರಾಮಕೃಷ್ಣ ಎಡ ಗುಂಪಿನವರು. ನಿರ್ಣಾಯಕ ಮೇಲ್ವರ್ಗದ ಮತಗಳ ವಿಭಜನೆ ಖಚಿತವಾದರೂ ಯಾರು ಎಷ್ಟು ಪಡೆಯುವರೋ ಎಂಬುದರ ಮೇಲೆಯೇ ಗೆಲವು ಅವಲಂಬಿಸಿದೆ.
 -ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement