ಜೆಡಿಎಸ್‌ಗೆ ಗೆಲವು ನಿಶ್ಚಿತ: ನಮೋಶಿ ವಿಶ್ವಾಸ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.24
ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಲೆ ಸೃಷ್ಟಿಯಾಗಿದ್ದು, ಈ ಚುನಾವಣೆಯಲ್ಲಿ ತಮ್ಮ ಗೆಲವು ನಿಶ್ಚಿತ ಎಂದು ಕ್ಷೇತ್ರದ ಅಭ್ಯರ್ಥಿ ಶಶೀಲ್ ನಮೋಶಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಚಾರ ಕೈಗೊಂಡ ಸ್ಥಳಗಳಲ್ಲಿ ಸ್ವಯಂ ಪ್ರೇರಿತರಾಗಿ ದಲಿತ, ಅಲ್ಪಸಂಖ್ಯಾತರ ನಾಗರಿಕರು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ ಎಂದರು. ಜನರ ನಂಬಿಕೆ ಕಳೆದುಕೊಂಡಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಆಡಳಿತಕ್ಕೆ ಬೇಸರಗೊಂಡಿರುವ ಮತದಾರರು ಈ ಬಾರಿ ಜೆಡಿಎಸ್‌ನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿಗೆ ಬೆಂಬಲಿಸಬೇಕು ಎಂದು ಕೋರಿದರು.
ಕಳೆದ 3 ವರ್ಷಗಳಿಂದ ತಮಗೆ ಟಿಕೆಟ್ ನೀಡುವುದಾಗಿ ಹೇಳಿ, ಪಕ್ಷದ ಏಳಿಗೆ, ಸಂಘಟನೆಗೆ ತಮ್ಮನ್ನು ಸಮರ್ಥವಾಗಿ ಬಳಸಿಕೊಂಡು ವಂಚಿಸಿದವರಿಗೆ ತಕ್ಕ ಪಾಠ ಕಲಿಸಿ. ವಿಧಾನ ಪರಿಷತ್ ಸದಸ್ಯನಾಗಿ ದಕ್ಷಿಣ ಮತಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಈ ಬಾರಿ ತಮ್ಮನ್ನು ವಿಧಾನಸಭೆಗೆ ಕಳುಹಿಸಿದಲ್ಲಿ ಮಾದರಿ ನಗರವನ್ನಾಗಿ ಮಾಡುತ್ತೇನೆ ಎಂದರು. ತಾಜಸುಲ್ತಾನ ಗ್ರಾಪಂ ಬಿಜೆಪಿ ಸದಸ್ಯರಾದ ಸೂರ್ಯಕಾಂತ ಸಿಂದಗಿ, ಶಿವಾನಂದ ದಾನಾಪುರ ಹಲವಾರು ಕಾರ್ಯಕರ್ತರೊಂದಿಗೆ ಜೆಡಿಎಸ್ ಸೇರ್ಪಡೆಯಾದರು.
ಗಾಜರೆ ಪಾದಯಾತ್ರೆ, ಮತಯಾಚನೆ
ಚಿಂಚೋಳಿ: ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಗಾಜರೆ ಅವರು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಕ್ಷೇತ್ರದ ಐನಾಪುರ ಮತ್ತು ಖಾನಾಪುರ ಸೇರಿದಂತೆ ವಿವಿಧ ಗ್ರಾಮ ಮತ್ತು ತಾಂಡಾಗಳಿಗೆ ಹಲವಾರು ಮುಖಂಡರು ಹಾಗೂ ನೂರಾರು ಕಾರ್ಯಕರ್ತರೊಂದಿಗೆ ತೆರಳಿ ಪಾದಯಾತ್ರೆ ನಡೆಸಿ ತಮಟೆ ಬಾರಿಸಿ ವಿಶಿಷ್ಟ ರೀತಿಯಲ್ಲಿ ಮತಯಾಚನೆ ನಡೆಸಿದರು.
20 ತಿಂಗಳ ಅವಧಿಯಲ್ಲಿ ಜೆಡಿಎಸ್ ನೇತೃತ್ವದ ಎಚ್.ಡಿ. ಕುಮಾರಸ್ವಾಮಿ ಅವರು ಕೈಗೊಂಡಿರುವ ಜನಪರ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟರು. ಕ್ಷೇತ್ರ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದು, ತಮ್ಮನ್ನು ಆಯ್ಕೆಗೊಳಿಸಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೊಳಿಸುವುದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ವಿನೋದ ಗದ್ದುಗಿಮಠ, ಶರಣು ಕೊಡಳಿ, ಜಗನ್ನಾಥ ಪಾಟೀಲ್, ಗುರು ಗಾಜರೆ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.