ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯಾಕಾಪುರ ಭರ್ಜರಿ ಪ್ರಚಾರ

Lingaraj Badiger
Updated On : 25 Apr 2013, 11:01 am

ಚಿಂಚೋಳಿ: ಚಿಂಚೋಳಿ ಮೀಸಲು ವಿಧಾನಸಭೆ ಮತಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದ್ದು, ಬಿಜೆಪಿ ಸರ್ಕಾರದ ಸಾಧನೆಗಳಾಗಿವೆ ಹೊರತು ಯಾವುದೇ ವ್ಯಕ್ತಿಯ ಸಾಧನೆಯಾಗಿಲ್ಲ. ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಯಾಕಾಪುರ ಆರೋಪಿಸಿದರು. ತಾಲೂಕಿನ ದೇಗಲಮಡಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಬುಧವಾರ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಚಿಂಚೋಳಿ ಸಕ್ಕರೆ ಕಾರ್ಖಾನೆ ಕಾಮಗಾರಿ ನೆನೆಗುದಿಗೆ ಬಿದ್ದು 22 ವರ್ಷಗಳೇ ಕಳೆದಿವೆ, ಕಂಪನಿಯಿಂದ ರೈತರಿಗೆ ಬೀಜಗೊಬ್ಬರಗಳನ್ನು ಸಹ ನೀಡಲಾಗಿದೆ ಎಂದರು. ತಮಗೆ ರಾಜಕೀಯ ಅನುಭವವಿದೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಉಮೇಶ ಜಾಧವ ಅವರಿಗೆ ಇನ್ನು ರಾಜಕೀಯ ಅನುಭವ ಇಲ್ಲ. ನಮ್ಮ ಸ್ಪರ್ಧೆ ಕಾಂಗ್ರೆಸ್- ಬಿಜೆಪಿ ಮಧ್ಯೆ ಇದೆ. ಈ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಗೊಳಿಸಿದರೆ ಸರ್ಕಾರದ ಯೋಜನೆಗಳು, ಸೌಲಭ್ಯಗಳು ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಹುಳಿಗೇರಾ, ಬಿಜೆಪಿ ಹಿರಿಯ ಮುಖಂಡ ಮಧುಸೂಧನ ಕಾಟಾಪುರ, ರವಿಶಂಕರರೆಡ್ಡಿ ಮುತ್ತಂಗಿ ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ರೇವಣಸಿದ್ದಪ್ಪ ಮಜ್ಜಗಿ, ಶ್ರೀಧರ ಪಾಟೀಲ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ದೇಗಲಮಡಿ ಗ್ರಾಮದ ಕೆಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು.
ಬಿಜೆಪಿ ಜೊತೆ ಸಂಬಂಧವಿಲ್ಲ: ಕಟ್ಟಿ
ಗುಲ್ಬರ್ಗ: ಬಿಜೆಪಿ ಪಕ್ಷಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ. ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ತಮ್ಮ ಹೆಸರು ಮತ್ತು ಭಾವಚಿತ್ರ ಹಾಕಿ ಪ್ರಚಾರ ಮಾಡಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಡಾ. ಎಸ್.ಎಚ್. ಕಟ್ಟಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಹಳ ದಿನಗಳ ಹಿಂದೆ ತಾವು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ರಾಷ್ಟ್ರೀಯ ಪರಿಷತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೇನೆ. ಆದರೂ ಈಗ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ತಮ್ಮ ಭಾವಚಿತ್ರಗಳನ್ನು ಬಳಸಿಕೊಂಡು ಮತಯಾಚಿಸುತ್ತಿರುವುದು ಕಂಡು ಬಂದಿದ್ದು, ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಲಂ 371 ಜೆ ಪ್ರತಿಧ್ವನಿಗೆ ಬೆಂಬಲಿಸಿ
ಸೇಡಂ: ಹೈದರಾಬಾದ್ ಕರ್ನಾಟಕ ಭಾಗದ ಕನಸು 371 ಕಲಂ ಈಡೇರಿಸಲು ತನ್ನನ್ನು ಗೆಲ್ಲಿಸುವ ಮೂಲಕ ವಿಧಾನಸಭೆಗೆ ಕಳುಹಿಸಿ ಎಂದು ಕೆಜೆಪಿ ಅಭ್ಯರ್ಥಿ ವೈಜನಾಥ ಪಾಟೀಲ್ ಕೋರಿದರು. ತಾಲೂಕಿನ ಕೊತ್ತಪಲ್ಲಿ ಗ್ರಾಮದಲ್ಲಿ ನಡೆದ ಕೆಜೆಪಿ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು, ಮುಧೋಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದಿಗೂ ಜನ ಮೂಲ ಸೌಕರ್ಯವಿಲ್ಲದೆ ವಂಚಿತರಾಗಿದ್ದಾರೆ. ಗೆಲವಿಗಾಗಿ ಅಲ್ಲದೆ ಹೋದರೂ ಜನರಿಗಾಗಿ ದುಡಿಯುವೆ ಎಂದರು. ವಿಧಾನಸಭೆಯಲ್ಲಿ 371 ಕಲಂ ಬಗ್ಗೆ ಧ್ವನಿ ಎತ್ತಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಹೈ-ಕ ಭಾಗದ ಜನರ ಹಲವು ವರ್ಷಗಳ ಕನಸು 371 ಕಲಂ ಜಾರಿ ಮಾಡುವುದೇ ನನ್ನ ಗುರಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement