ರಾಜ್ ಕನ್ನಡದ ಧ್ರುವತಾರೆ
ಯಾದಗಿರಿ: ಡಾ. ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಧ್ರುವತಾರೆ. ಅವರೊಬ್ಬ ವರನಟರಾಗಿದ್ದು, ಇಂದಿನ ಯುವಕರಿಗೆ ಅವರು ಪ್ರೇರಣೆಯಾಗಿದ್ದಾರೆ. ಅವರ ಸಾಮಾಜಿಕ ಕಳಕಳಿ, ಮಾನವೀಯ ಗುಣ ಮುಂತಾದ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಲ್ಲಯ್ಯ ಗುಂಡಗುರ್ತಿ ಹೇಳಿದರು.
ಚಲನ ಚಿತ್ರಗಳಿಂದಲೂ ಬದಲಾವಣೆ: ಇಲ್ಲಿಯ ಚಿರಂಜೀವಿ ನಗರದಲ್ಲಿ ಬುಧವಾರ ಡಾ. ರಾಜಕುಮಾರ ಅಭಿಮಾನಿಗಳ ಸಂಘದಿಂದ ಏರ್ಪಡಿಸಿದ್ದ ರಾಜ್ ಅವರ 85ನೇ ಹುಟ್ಟು ಹಬ್ಬವನ್ನು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಚಲನಚಿತ್ರದ ಮೂಲಕವೂ ಸಾಮಾಜಿಕ ಬದಲಾವಣೆ ತರಬಹುದು ಎಂಬುದು ರಾಜ್ ಅವರ ಚಿತ್ರಗಳಲ್ಲಿ ಕಾಣಬಹುದು. ಕುಟುಂಬ ಸದಸ್ಯರೆಲ್ಲ ಸೇರಿ ಸಿನಿಮಾ ನೋಡಬಹುದಿತ್ತು. ಇಂದು ಕಾಲ ಬದಲಾಗಿದ್ದು, ಮಸಾಲಾ ಚಿತ್ರಗಳ ಸಂಖ್ಯೆಯೇ ಹೆಚ್ಚಿದೆ. ಆದ್ದರಿಂದ ಇಂದು ರಾಜ್ ಪ್ರಸ್ತುತ ಎನಿಸಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯಬೇಕಿದೆ ಎಂದು ಹೇಳಿದರು.
ಹೆಸರಿಡಲು ಶ್ರಮಿಸಿ: ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಸೈದಪ್ಪ ಗುತ್ತೇದಾರ ಮಾತನಾಡಿ, ಡಾ.ರಾಜಕುಮಾರ ಕೇವಲ ನಟರಲ್ಲ, ಅವರು ಕನ್ನಡಕ್ಕಾಗಿ ಹೋರಾಡಿದ ಧೀಮಂತ ನಾಯಕ ಕೂಡ ಹೌದು. ಅವರ ಹುಟ್ಟುಹಬ್ಬ ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ನಗರದ ಉದ್ಯಾನವನ, ವೃತ್ತಗಳಿಗೆ ಅವರ ಹೆಸರು ಇಡಲು ಸಂಘ ಶ್ರಮಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸ್ವೀಪ್ ಕಮಿಟಿಯಿಂದ ಮತದಾನದ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಲಾಯಿತು. ಅಭಿಮಾನಿ ಸಂಘದ ರಾಘವೇಂದ್ರ ಗುತ್ತೇದಾರ, ಪ್ರವೀಣ, ಶ್ರೀಧರ, ಪ್ರಭು, ಶರಣು, ಶೀವು, ಸೂಗಪ್ಪ ಪಾಟೀಲ್ ಇತರರು ಇದ್ದರು. ಮಕ್ಕಳು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.