'ರಾಜ್ಯದ ಉತ್ತಮ ಭವಿಷ್ಯ ಕಾಂಗ್ರೆಸ್‌ನಿಂದ ಮಾತ್ರ'
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.24
ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ರಾಜ್ಯದ ಭವಿಷ್ಯವನ್ನು ಉತ್ತಮವಾಗಿ ಬೆಳೆಸುವ ಶಕ್ತಿ ಕಾಂಗ್ರೆಸ್‌ಗೆ ಮಾತ್ರ ಸಾಧ್ಯ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲ್ಲಿಸಲು ತೀರ್ಮಾನಿಸಿದೆ.
ರಾಜ್ಯದ ಎಲ್ಲ ಜಾತಿ ವರ್ಗದ ಜನತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ರಾಜ್ಯದಲ್ಲಿ ಸುಭದ್ರ ಕಾಂಗ್ರೆಸ್ ಸರ್ಕಾರ ರಚನೆಗೆ ಅನುವು ಮಾಡಿಕೊಡಬೇಕೆಂದು ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಮನವಿ ಮಾಡಿದರು.
ಅಪಾರ ಭ್ರಷ್ಟಾಚಾರ: ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲನೇ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇನ್ನು ಮುಂದೆ ತಾನು ಮತ್ತೆ ಚುನಾಯಿಸುವುದಿಲ್ಲವೇನೋ ಎಂಬ ಆತಂಕದಲ್ಲಿ ಅವಸರವಾಗಿ ನಾಡಿನ ಪ್ರಕೃತಿ ಸಂಪತ್ತನ್ನು ಲೂಟಿ ಮಾಡಿದ್ದಲ್ಲದೇ, ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆಸಿತು ಎಂದು ಆರೋಪಿಸಿದರು.
ಕೀಳು ರಾಜಕೀಯ: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾದವು. ಚರ್ಚ್‌ಗಳ ಮೇಲೆ ಹಲ್ಲೆ ನಡೆದವು. ಮುಸ್ಲಿಂರ ಜೀವನೋಪಾಯಕ್ಕೆ ಸಂಚಕಾರ ತರುವಂಥ ಕಾಯ್ದೆಗಳನ್ನು ಜಾರಿಗೆ ಮಾಡಿದೆ ಎಂದರು.
ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳ ಅಧ್ಯಕ್ಷರ ಮೇಲೆ ಇನ್ನೂ ಕೇಸ್‌ಗಳಿವೆ. ಸ್ವಜನ ಪಕ್ಷಪಾತದಿಂದ ಈ ಪಕ್ಷ ಹೊರತಾಗಿಲ್ಲ, ಆಸೆ ತೋರಿಸಿ ಇತರ ಪಕ್ಷಗಳ ಸದಸ್ಯರುಗಳನ್ನು ಸೆಳೆದುಕೊಳ್ಳುವ ಮೂಲಕ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದರು.
ಜೆಡಿಎಸ್ ಪಕ್ಷ ಜಾತ್ಯಾತೀತ ತತ್ವವನ್ನು ಹೇಳುತ್ತಿದ್ದರೂ ಇದರ ನೆಲೆ ಸ್ವಜಾತಿಯಲ್ಲಿ ಮಾತ್ರ. ಕ್ರಮವಾಗಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷಕ್ಕೆ ಅಧ್ಯಕ್ಷರಾಗಿ ತಮ್ಮ ಜಾತಿಯ ಮತಗಳನ್ನು ಒಟ್ಟುಗೂಡಿಸುವ ವರಸೆಯನ್ನು ಈ ಪಕ್ಷ ಎಂದಿನಿಂದಲೂ ಮುಂದುವರೆಸಿಕೊಂಡು ಬಂದಿದೆ ಎಂದು ಆರೋಪಿಸಿದರು. ಜೀವನಹಳ್ಳಿ ಆರ್. ವೆಂಕಟೇಶ, ರವಿ ಮದನಕರ್, ನೀಲಾ ಮಡಪೆ, ಜಯಶ್ರೀ ದೊಡ್ಮನಿ, ಶ್ರೀಮಂತ ಸುಲೇಕರ್, ಮಹೇಶ ಶಾಖಾ ಇದ್ದರು.
ಕಾಂಗ್ರೆಸ್ ಪರ ಭರ್ಜರಿ ಪ್ರಚಾರ
ಚಿತ್ತಾಪುರ: ತಾಲೂಕಿನ ಅಲ್ಲೂರ್ (ಕೆ) ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಪರ ಚುನಾವಣೆ ಪ್ರಚಾರ ಮಾಡಿದರು.
ಗ್ರಾಮದಲ್ಲಿ ಮುಖಂಡ ವೆಂಕಣ್ಣಗೌಡ ಪಾಟೀಲ್, ನಾಗನಗೌಡ ಪಾಟೀಲ್, ಭಾರತೀಯ ದಲಿತ ಪ್ಯಾಂಥರ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ, ಬಸವರಾಜ ತುಪ್ಪದ ನೇತೃತ್ವದಲ್ಲಿ ರೋಡ್ ಶೋ ನಡೆಸಿ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡಿದರು.
ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಇಂದು ಕಾಂಗ್ರೆಸ್ ಜಯಗಳಿಸಬೇಕಾಗಿದೆ. ಬಿಜೆಪಿಯ ಒಳಜಗಳದಿಂದಾಗಿ ಅಭಿವೃದ್ಧಿಯಿಲ್ಲದೇ ಜನತೆ ಬೇಸರಗೊಂಡಿದ್ದಾರೆ. ಕೆಜೆಪಿಯ ಪ್ರಾದೇಶಿಕ ಪಕ್ಷವಾಗಿರುವುದರಿಂದ ಇಲ್ಲಿ ನೆಲೆಯಿಲ್ಲ. ಇದರಿಂದಾಗಿ ಎಲ್ಲಡೆ ಕಾಂಗ್ರೆಸ್ ಪಕ್ಷದ ಅಲೆ ಇದ್ದು, ಈ ಬಾರಿ ಪ್ರಿಯಾಂಕ್ ಖರ್ಗೆ ಹೆಚ್ಚಿನ ಮತಗಳಿಂದ ಗೆಲ್ಲಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.