ಅಭಿವೃದ್ಧಿ ನೋಡಿ ಮತ ಹಾಕಿ: ಶಾಸಕ ಗುತ್ತೇದಾರ
ಆಳಂದ: ನನ್ನ ಅಧಿಕಾರಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ, ಇದೊಂದು ಬಾರಿ ಮತವನ್ನು ನೀಡಿ ಗೆಲ್ಲಿಸಬೇಕೆಂದು ಜೆಡಿಎಸ್ ಅಭ್ಯರ್ಥಿ ಶಾಸಕ ಸುಭಾಷ ಗುತ್ತೇದಾರ ಮತದಾರರಿಗೆ ಮನವಿ ಮಾಡಿದರು.
ಕ್ಷೇತ್ರದಲ್ಲಿನ ಆಯ್ದ ಗ್ರಾಮಗಳಲ್ಲಿ ಕೈಗೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಯಳಸಂಗಿ, ಬೆಣ್ಣೆಶಿರೂರ, ಮಾಡಿಯಾಳ, ಕುಡಗಿ ನಿಂಬರಗಾ ಗ್ರಾಮಗಳಲ್ಲಿ ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಮತಯಾಚಿಸಿದರು.
ಜಿಡಗಾ ಗ್ರಾಮದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಾತನಾಡಿ, ಯಾರ ಮಾತಿಗೂ ಕಿವಿಗೊಡದೆ, ಜನಪರ ಕೆಲಸ ಮಾಡುವ ಶಾಸಕ ಗುತ್ತೇದಾರ ಅವರಿಗೆ ಪ್ರಚಂಡ ಮತಗಳಿಂದ ಗೆಲ್ಲಿಸಬೇಕು ಎಂದರು.
ಚನ್ನವೀರ ಕಾಳಕಿಂಗೆ, ಚಂದ್ರಾಮಪ್ಪ ಘಂಟೆ, ಪಿಎಲ್ಣಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಣಮಂತ ಕಾಬಡೆ, ಕಲ್ಯಾಣಿ ಧಾನಗೌಡ, ರಾಮಲಿಂಗ ಹತ್ತರಕಿ, ಸೋಮು ಹತ್ತರಕಿ, ಗ್ರಾಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಾಳಕಿಂಗೆ ಪಾಲ್ಗೊಂಡಿದ್ದರು. ಬಳಿಕ ರಾಜೋಳ, ಗುಳ್ಳೋಳ್ಳಿ ಮತ್ತಿತರ ಗ್ರಾಮಗಳಲ್ಲಿ ಶಾಸಕ ಗುತ್ತೇದಾರ ಅವರು ಪ್ರಚಾರ ಕೈಗೊಂಡು ಮತಯಾಚಿಸಿದರು. ಮತ್ತೊಂದಡೆ ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಅಶೋಕ ಸಾವಳೇಶ್ವರ, ಮಲ್ಲಣ್ಣ ನಾಗೂರೆ, ಅಬ್ದುಲ್ ಸಲಾಂ ಸಗರಿ ನೇತೃತ್ವದಲ್ಲಿ ಕಾರ್ಯಕರ್ತರು ವಿವಿಧಡೆ ಪ್ರಚಾರ ಕೈಗೊಂಡು ಜೆಡಿಎಸ್ ಅಭ್ಯರ್ಥಿ ಗುತ್ತೇದಾರ ಅವರಿಗೆ ಚುನಾಯಿಸಬೇಕು ಎಂದು ವಿನಂತಿಸಿದರು.