ತಂದೆ ಗೆಲವಿಗೆ ಪುತ್ರನ ಬಿರುಸಿನ ಪ್ರಚಾರ
ಜೇವರ್ಗಿ: ಜೇವರ್ಗಿ ಮತ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೇದಾರಲಿಂಗಯ್ಯ ಹಿರೇಮಠ ಅವರ ಪುತ್ರ ಡಾ. ವಿವೇಕಾನಂದ ಹಿರೇಮಠ ತಾಲೂಕಿನ ಗ್ರಾಮಗಳಲ್ಲಿ ತಂದೆ ಗೆಲವಿಗಾಗಿ ಮತಯಾಚನೆ ಆರಂಭಿಸಿದ್ದಾರೆ.
ಸ್ಥಳೀಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿರುವ ಡಾ. ವಿವೇಕಾನಂದ ಅವರು ಕೇದಾರಲಿಂಗಯ್ಯ ಹಿರೇಮಠ ಅವರ ಜೇಷ್ಠ ಪುತ್ರ ಸ್ನಾತ್ತಕೊತ್ತರ ಪ್ರವೇಶ ಪರೀಕ್ಷೆಯನ್ನು ಬಿಟ್ಟು, ತಂದೆಯನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿಯೇ ತಿರುತ್ತೇನೆಂದು ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ 10 ದಿವಸಗಳಿಂದ ಬಿರು ಬೀಸಿಲಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಕೈಯಲ್ಲೊಂದಿಷ್ಟು ಪ್ರಣಾಳಿಕೆ ಪ್ರತಿ, ತಂದೆ ಅವರು ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಹೋರಾಟದ ದಾಖಲೆಗಳ ಪ್ರತಿ, ಬ್ಯಾಲೆಟ್ಸ್ನ ಮಾದರಿಗಳೊಂದಿಗೆ ಬೆ.8ರಿಂದ ರಾತ್ರಿ 10ರವರೆಗೆ ಗ್ರಾಮದ ಪ್ರತಿಯೊಂದು ಮನೆಗೆ ಭೇಟಿ ನೀಡಿ ಮನೆಯಲ್ಲಿರುವರನ್ನು ಮಾತನಾಡಿಸಿ, ಒಂದು ಮನೆಯಲ್ಲಿ ಊಟ, ಮತ್ತೊಂದು ಮನೆಯಲ್ಲಿ ತಿಂಡಿ, ಮಗದೊಂದು ಮನೆಯಲ್ಲಿ ಚಹಾ ಸೇವಿಸುತ್ತ ಕಾಲಿಗೆ ಚಕ್ರ ಕಟ್ಟಿಕೊಂಡು ಎಲ್ಲಿಯೂ ಕ್ಷಣ ಹೊತ್ತು ವ್ಯಯ ಮಾಡದೆ ಪ್ರಚಾರ ಮಾಡುತ್ತಿದ್ದಾರೆ.