ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಳಗಿದ್ರೆ ಮಾತ್ರ ಅನುದಾನ ತರಲು ಸಾಧ್ಯ: ಮಾಲಕರಡ್ಡಿ

Rashmi Kasaragodu
Updated On : 26 Apr 2013, 11:13 am

ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.25
ಬರೀ ಎಂಎಲ್ಎ ಆದ್ರೆ ಸಾಲದು. ಶಾಸಕನಾದವ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ತರುವ ಶಕ್ತಿ ಹೊಂದಿರಬೇಕು. ಆ ಕೆಲಸ ಒಂದೇ ಪಕ್ಷದಿಂದ ಕನಿಷ್ಠ ಮೂರು ಬಾರಿ ಚುನಾಯಿತರಾಗಿ ಆಯ್ಕೆಯಾದ ಹಿರಿಯ ಶಾಸಕರಿಂದ ಮಾತ್ರ ಸಾದ್ಯ. ಅಂತಹ ಹಿರಿಯ ಶಾಸಕರಲ್ಲಿ ತಾವೂ ಒಬ್ಬರು ಎಂದು ಡಾ. ಎ.ಬಿ. ಮಾಲಕರೆಡ್ಡಿ ಹೇಳಿದರು.
  ಹೆಡಗಿಮದ್ರಿ ಗ್ರಾಮದ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಚುನಾವಣೆ ಬಂತೆಂದರೆ ಸಾಕು ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಬಿಟ್ಟು ಸ್ಪರ್ಧಿಸುತ್ತಾರೆ. ಒಂದು ಬಾರಿ ಒಂದು ಪಕ್ಷದಿಂದ ಸ್ಪರ್ಧಿಸಿ ಸೋತು, ಮತ್ತೊಂದು ಬಾರಿ ಇನ್ನೊಂದು ಪಕ್ಷದ ಜತೆ ಕೈಜೋಡಿಸಿ, ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಪಕ್ಷಕ್ಕೆ ಯಾವುದೇ ಇರಲಿ, ಆ ಪಕ್ಷಕ್ಕೆ ಸಿದ್ಧಾಂತವಿರಲಿ ಬಿಡಲಿ, ತಮ್ಮ ವೈಯಕ್ತಿಕ ಲಾಭಕ್ಕಾಗಿ ಮತದಾರರಿಗೆ ಸುಳ್ಳು ಭರವಸೆಗಳನ್ನು ತುಂಬುವ ಮುಖಾಂತರ ಎಂಎಲ್ಎ ಆಗುವ ಕನಸು ಕಾಣುತ್ತಾರೆ. ಆದರೆ ಜನ ಪ್ರಜ್ಞಾವಂತರಾಗಿದ್ದಾರೆ. ಇಂಥ ನಾಟಕ ಬಹಳ ದಿನ ನಡೆಯುವುದಿಲ್ಲ. ಮತದಾರರು ಯಾರು ಹೇಗೆ ಎಂಬುದನ್ನು ಬಲ್ಲವರಾಗಿದ್ದಾರೆ. ಅವರ ಹತ್ತಿರ ಯಾವ ಮೋಸವೂ ನಡೆಯುವುದಿಲ್ಲ ಎಂದು ತಮ್ಮ ಪ್ರತಿಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಾತಿಗೆ ಮರುಳಾಗಬೇಡಿ: ಮತದಾರರು ಬಹಳ ಯೋಚಿಸಿ ತಮ್ಮ ಮತ ಚಲಾಯಿಸಬೇಕು. ಕಾಂಗ್ರೆಸ್ನಿಂದ ಮಾತ್ರ ಸ್ಥಿರ, ಉತ್ತಮ ಆಡಳಿತ ಸಾಧ್ಯ. ಈ ಬಾರಿ ಕಾಂಗ್ರೆಸ್ ಯಾರ ಬೆಂಬಲವೂ ಇಲ್ಲದೇ ಅಧಿಕಾರಕ್ಕೆ ಬರಲಿದ್ದು, ಸುಮಾರು 8  ವರ್ಷಗಳಿಂದ ಜನರನ್ನು ವಂಚಿಸುತ್ತ ತಮ್ಮ ವೈಯಕ್ತಿಕ ಲಾಭ ಪಡೆದುಕೊಂಡವರು ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಅವರಿಂದ ಆಗದ ಅಭಿವೃದ್ಧಿ ಕಾರ್ಯಗಳೆಲ್ಲವನ್ನೂ ಕಾಂಗ್ರೆಸ್ ಮಾಡಲಿದೆ. ಆದ್ದರಿಂದ ಮತದಾರರು ನಿಷ್ಠೆ ಇಲ್ಲದ ಬೇರೆ ಯಾವ ಪಕ್ಷದ ಅಭ್ಯರ್ಥಿಗಳ ಮಾತಿಗೆ ಮರುಳಾಗದೆ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಚಂದ್ರಾಮ ಕಟಕಟಿ, ದೇವಿಂದ್ರ, ಯಂಕಣ್ಣ ದಾಸರ ನೇತೃತ್ವದಲ್ಲಿ ಅನೇಕರು ಕೆಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement