ಶಾಸಕರಿಂದ ಜನರಿಗೆ ಮೋಸ
ಕನ್ನಡಪ್ರಭ ವಾರ್ತೆ ಜೇವರ್ಗಿ ಏ.25
ಕ್ಷೇತ್ರದಿಂದ ಆಯ್ಕೆಯಾದ ಇಬ್ಬರು ಶಾಸಕರು ತಾಲೂಕಿನ ಜನರಿಗೆ ಮೋಸ ಮಾಡಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಕೇದಾರಲಿಂಗಯ್ಯ ಹಿರೇಮಠ ಆರೋಪಿಸಿದರು.
ತಾಲೂಕಿನ ಸಾತಖೇಡ ಗ್ರಾಮದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ಒಬ್ಬರು ಎಂಟು ಬಾರಿ ಇನ್ನೊಬ್ಬರು ಒಂದು ಬಾರಿ ಶಾಸಕರಾಗಿದ್ದಾರೆ. ಚುನಾವಣಾ ಸಮಯದಲ್ಲಿ ಮಾಡಿದ ವಾಗ್ದಾನದಂತೆ ಇಬ್ಬರೂ ನಡೆದುಕೊಂಡಿಲ್ಲ. ಇದುವರೆಗೂ ತಾಲೂಕು ಅಭಿವೃದ್ಧಿ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ತಾಲೂಕಿಗೆ ಒಂದು ಕೈಗಾರಿಕೆ ತರಲಿಲ್ಲ, ನಿರುದ್ಯೋಗ ಹೋಗಲಾಡಿಸಲಿಲ್ಲ. ಉತ್ತಮ ಶೈಕ್ಷಣಿಕ ಸೌಲಭ್ಯ ಕಲ್ಪಿಸಲಿಲ್ಲ, ಶುದ್ಧ ಕುಡಿವ ನೀರು ನೀಡುವಲ್ಲಿಯೂ ವಿಫಲರಾಗಿದ್ದಾರೆ. ಸಂಕಷ್ಟದಲ್ಲಿದ್ದ ರೈತರ ಕಣ್ಣೊರೆಸಲಿಲ್ಲ. ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಿಲ್ಲ ಎಂದು ಆರೋಪಿಸಿದರು.
ಗ್ರಾಮದ ಮುಖಂಡ ಮೌನೇಶ ಕುಕನೂರ ಮಾತನಾಡಿ, ಈಗಾಗಲೇ ಕೇದಾರಲಿಂಗಯ್ಯ ಹಿರೇಮಠ ಅವರು ರೈತರಿಗೆ ಹಾಗೂ ಬಡ ಮಕ್ಕಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಬೆಳೆ ವಿಮೆ ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಒಂದು ಲಕ್ಷ ರು. ವಿಮೆ ಮಾಡಿಸಿ ಬಾಂಡ್ ವಿತರಣೆ ಮಾಡಿದ್ದಾರೆ. ಈ ಭಾಗದ ಜಮೀನುಗಳಿಗೆ ನೀರುಣಿಸಲು ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ಹೋರಾಟ ಮಾಡಿದ್ದಾರೆ ಎಂದು ವಿವರಿಸಿದರು. ಇದೇ ವೇಳೆ ಅಭ್ಯರ್ಥಿ ಕೇದಾರಲಿಂಗಯ್ಯ ಹಿರೇಮಠ ಅವರು ಗ್ರಾಮಸ್ಥರಿಗೆ ವಾಗ್ದಾನ ಪತ್ರವನ್ನು ನೀಡಿದರು.