ಅಂಬೇಡ್ಕರ್ ಜಯಂತಿ
ಶಹಾಪುರ: ಭಾರತ ಬಹು ಸಂಸ್ಕೃತಿ, ಧರ್ಮ, ಭಾಷೆ ಮತ್ತು ಅಸಮಾನತೆಯಿಂದ ಬಳುತ್ತಿದ್ದ ಸಂದರ್ಭದಲ್ಲಿ ಅಂಬೇಡ್ಕರರು ತಮ್ಮ ಹರಿತವಾದ ಲೇಖನಿಯಿಂದ ಈ ಎಲ್ಲ ಜನ ಸಮಾನವಾಗಿ ಬದುಕುವಂಥ ಮತ್ತು ಮೆಚ್ಚುವಂಥ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆಂದು ಜ್ಞಾನಪ್ರಕಾಶ ಸ್ವಾಮಿ ಅಭಿಪ್ರಾಯಪಟ್ಟರು.
ಅವರು ಹಬ್ಬಳ್ಳಿ ಗ್ರಾಮದಲ್ಲಿ ನಡೆದ ಅಂಬೇಡ್ಕರರ 122ನೇ ಜಯಂತಿ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರು ದೇಶದಲ್ಲಿ ವಾಸಿಸುವ ಎಲ್ಲ ಜೀವಿಗಳಿಗೂ ಸ್ವತಂತ್ರವಾಗಿ ಜೀವಿಸುವಂತೆ ಸಂವಿಧಾನ ರಚಿಸಿದ್ದಾರೆ.
ಅಂಬೇಡ್ಕರಂತಹ ನೇರ ದಿಟ್ಟ ನಾಯಕರನ್ನು ಇಂದು ನಾವು ಕಾಣುತ್ತಿಲ್ಲ. ಅಂಬೇಡ್ಕರ್ ಎಲ್ಲ ವರ್ಗದ ಜನರಿಗೆ ಸಮಾನವಾಗಿ ರಾಜಕೀಯ ಹಕ್ಕನ್ನು ನೀಡಿದ್ದಾರೆ ಎಂದರು.
ಪ್ರಜಾಪ್ರಭುತ್ವದ ಆಶಯ ಈಡೇರಿಸಿ: ಇಂದು ಈ ಹಕ್ಕು ದುರುಪಯೋಗವಾಗುತ್ತಿರುವುದು ವಿಷಾದನೀಯ. ಆದ್ದರಿಂದ ನಮ್ಮ ಕೆಲಸವನ್ನು ಯಾರು ಸರಿಯಾಗಿ ನಿರ್ವಹಿಸುತ್ತಾರೋ ಅಂಥವರಿಗೆ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಈಡೇರಿಸಬೇಕೆಂದು ಕಿವಿಮಾತು ಹೇಳಿದರು.
ಡಾ. ರವಿಂದ್ರನಾಥ ಹೊಸ್ಮನಿ ಪ್ರಾಸ್ತಾವಿಕ ಮಾತನಾಡಿದರು. ಸಭೆ ಅಧ್ಯಕ್ಷತೆಯನ್ನು ವಹಿಸಿದ ಹೊನ್ನಪ್ಪ ಗಂಗನಾಳ ಮಾತನಾಡಿ, ಅಂಬೇಡ್ಕರರ ಆದರ್ಶವನ್ನು ಮೈಗೂಡಿಸಿಕೊಂಡಾಗ ಅವರ ಆಚರಣೆ ಸಾರ್ಥಕ ವಾಗುತ್ತದೆ ಎಂದರು.