ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಕೇದಾರಲಿಂಗಯ್ಯ ಮನವಿ
ಜೇವರ್ಗಿ: ಸೋಲುವ ಭೀತಿಯಿಂದ ಕಣದಲ್ಲಿದ್ದ ಉಮೇದುವಾರರು ಮತದಾರರಲ್ಲಿ ತಮ್ಮ ಬಗ್ಗೆ ಮಾಡುತ್ತಿರುವ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು ಎಂದು ಜೆಡಿಎಸ್ ಅಭ್ಯರ್ಥಿ ಕೇದಾರಲಿಂಗಯ್ಯ ಹಿರೇಮಠ ಮತದಾರರಿಗೆ ಮನವಿ ಮಾಡಿದರು.
ತಾಲೂಕಿನ ಕಣಮೇಶ್ವರ ಗ್ರಾಮದಲ್ಲಿ ಮತದಾರರೊಂದಿಗೆ ನಡೆಸಿದ ಚರ್ಚೆಯಲ್ಲಿ ಮಾತನಾಡಿ, 50 ವರ್ಷಗಳಿಂದ ಒಬ್ಬರಿಗೆ ಮತ ನೀಡಿದರೆ ಏನಾಗುತ್ತದೆ ಎಂದು ಮತದಾರರಿಗೆ ಅರಿವಾಗಿದೆ. ತಾಲೂಕಿನಾದ್ಯಂತ ಜೆಡಿಎಸ್ ಪರ ಅಲೆ ಇದೆ, ಇದನ್ನು ಮನಗಂಡು ಈಗ ನನ್ನ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ವಿಮಾ ಕಂಪನಿಗೆ ಎಷ್ಟು ಹಣ ಕಟ್ಟಿದ್ದೇನೆ ಎನ್ನುವುದು ಬೇಕಿಲ್ಲ. 50 ವರ್ಷ ತಾಲೂಕಿನ ಜನ ನಿಮಗೆ ಇಷ್ಟೆಲ್ಲ ಅಧಿಕಾರ ಕೊಡಿಸಿದ್ದಾರೆ, ಅವರಿಗೆ ನೀವೆನು ಮಾಡಿದ್ದೀರಿ ಎಂದು ಬಹಿರಂಗವಾಗಿ ಹೇಳಿ. ಮತದಾರರ ಮನೆಗೆ ರಾತ್ರಿ ಹೋಗಿ ಹಣ ಕೊಟ್ಟು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವ ನಾಚಿಕೆಯಾಗಬೇಕು ಎಂದು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ಜೆಡಿಎಸ್ ಪರ ಕಿನ್ನೂರ ಪ್ರಚಾರ: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಉದ್ಯಮಿಯಾಗಿರುವ ತಾಲೂಕಿನ ಹರವಾಳ ಗ್ರಾಮದ ಧರ್ಮರಾಜ ಶಿವಲಿಂಗಪ್ಪ ಕಿನ್ನೂರ ಅವರು ಪ್ರಚಾರ ಕೈಗೊಂಡಿದ್ದಾರೆ. ಈಗಾಗಲೇ ತಾಲೂಕಿನ ಅವರಾದ, ಶಾಖಾಪುರ, ಹಲಗಡ್ಲಾ, ಅಂದೋಲಾ, ಗೌನಳ್ಳಿ, ಕೂಡಿ ದರ್ಗಾ, ಕಟ್ಟಿ ಸಂಗಾವಿ, ಮದರಿ, ಗುಡೂರ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ.