ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶರಣರು ಗುಲಾಮಗಿರಿ ಪೋಷಿಸಲಿಲ್ಲ

Rashmi Kasaragodu
Updated On : 27 Apr 2013, 11:04 am

ಕನ್ನಡಪ್ರಭ ವಾರ್ತೆ, ಶಹಾಪುರ, ಏ.26
ಸ್ವಾನುಭವದ ಪ್ರಜ್ಞೆಯಿಲ್ಲದೆ, ಅನುಭಾವದ ಮೊತ್ತವಾಗದೆ, ಸಾಮಾಜಿಕ ಕಳಕಳಿ ಇಲ್ಲದ ಯಾವ ವ್ಯಕ್ತಿಯೂ ಗುರು ಅಲ್ಲವೇ ಅಲ್ಲ. ಭಕ್ತನೇ ಗುರು- ಲಿಂಗ- ಜಂಗಮವಾಗಬಹುದೇ ಹೊರತು ವೇಷ ಹೊತ್ತು ತಿರುಗುವ ಲಾಂಛನದಾರಿಗಳು ಕರೆವೆಣ್ಣುಗಳಿಗೆ ಸಮವಾಗಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ಡಿ.ಎಂ. ಧನ್ನೂರ ಅವರು ಇಂದಿನ ವೇಷದಾರಿ ಮಠಾಧೀಶರ ನಡಾವಳಿಯನ್ನು ತೀವ್ರವಾಗಿ ಕುಟುಕಿದರು.
ಪಟ್ಟಣದ ಬಸವ ಮಾರ್ಗ ಪ್ರತಿಷ್ಠನಾದ ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ಜರುಗಿದ ಬಸವ ಬೆಳಕು ಕಾರ್ಯಕ್ರಮದಲ್ಲಿ ಲಿಂಗಾಯತ ತತ್ವ ಅನುಷ್ಠಾನಗೊಳ್ಳದಿರಲು ಕಾರಣಗಳೇನು ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಯಾರೂ ಕನಿಷ್ಠರಲ್ಲ, ಇನ್ನಾರೂ ಶ್ರೇಷ್ಠರಲ್ಲ: ಗುರು, ಲಿಂಗ, ಜಂಗಮವನ್ನು ಪರೀಕ್ಷಿಸಿ ಹಿಡಿಯದ ಭಕ್ತಿ ಬೇರು ಮೇಲಾದ ಗಿಡಕ್ಕೆ ನೀರೆರೆದಂತೆ ವ್ಯರ್ಥ. ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ. ಈ ಮೂರು ಸ್ಥಲಗಳನ್ನು ಯಾರು ಬೇಕಾದರೂ ತಲುಪಬಹುದು. ನಿರಾಕಾರವಾಗಿರುವ ದೇವನ ಚಿತ್ ಬೆಳಕೇ ಮಾನವ. ಯಾರೂ ಕನಿಷ್ಠ ಅಲ್ಲ, ಇನ್ನಾರೂ ಶ್ರೇಷ್ಠರೂ ಅಲ್ಲ. ಜ್ಯೋತಿ ಮುಟ್ಟಿ ಜ್ಯೋತಿಯಾಗುವ ವೈಜ್ಞಾನಿಕ- ವೈಚಾರಿಕ ಸಮಾಜವನ್ನು ಕಟ್ಟಿದವರು ಶರಣರು ಎಂದು ಅವರು ಪ್ರತಿಪಾದಿಸಿದರು.
ಲಿಂಗಾಯತವೆಂಬುದು ಜಾತಿಯಲ್ಲ. ಲಿಂಗ ಜಾತಿಯ ಕುರುಹೂ ಅಲ್ಲ. ಆದರೆ ವೇಷದಾರಿ ಗುರುಗಳೆಂಬ ಪೆಡಂಭೂತಗಳು ಬಸವಣ್ಣನವರು ಕಟ್ಟ ಬಯಸಿದ ಸಮಾಜವನ್ನು ಹುರಿದು ತಿಂದಿವೆ. ಗುಲಾಮಗಿರಿಯನ್ನು ಶರಣರು ಎಂದೂ ಪರಿಪೋಷಣೆ ಮಾಡಿದವರಲ್ಲ. ಆದರೆ ಇಂದು ಬಹುತೇಕ ಮಠಾಧೀಶರು ಲಿಂಗಾಯತರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ. ಯಜ್ಞ- ಯಾಗ, ವೇದ- ಪುರಾಣಗಳ ಕರ್ಮಠ ಆಚರಣೆಗಳ ಮೂಲಕ ಅವರನ್ನು ತಮ್ಮ ದಾಸರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಖಾರವಾಗಿ ನುಡಿದರು.
ಯಜ್ಞ, ಯಾಗ- ಟೀಕೆ: ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟ ಮಾತನಾಡಿ, 770 ಶರಣ ಗಣಂಗಳ ಹೆಸರಿನ ಮೇಲೆ ಜಾತಿ ಅಯ್ಯಗಳ ಪಾದವನ್ನು ತೊಳೆದು ಯಜ್ಞ ಯಾಗಗಳನ್ನು ಮಾಡಿಸಿದ್ದು ಲಿಂಗಾಯತ ಧರ್ಮದ್ರೋಹದ ಕೆಲಸವೆಂದು ಕಟುವಾಗಿ ಟೀಕಿಸಿದರು.
 ದೇವರು, ಧರ್ಮಗಳು ನಮ್ಮ ಅಂತರಂಗದ ಆರೋಗ್ಯಕರ ಬೆಳವಣಿಗೆಗೆ ಸಹಾಯಕವಾಗದೆ ನಮ್ಮನ್ನು ಶೋಷಿಸುವ ಶಕ್ತಿಗಳಾಗುವುದಕ್ಕೆ ಮೂಲ ಕಾರಣೀಕರ್ತರೇ ಮಠಾಧೀಶರು. ಅವರ ತಪ್ಪು ತಿಳಿವಳಿಕೆ ಹಾಗೂ ಬಸವ ವಿರೋಧಿ ದ್ರೋಹ ಚಿಂತನೆಯಿಂದ ಇಂದು ಲಿಂಗಾಯತ ತತ್ವ ಅಪಮೌಲ್ಯಗೊಳ್ಳುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗುಂಡಣ್ಣ ಕಲಬುರ್ಗಿ ಮಾತನಾಡಿದರು. ಲಿಂ. ಭಾಗಮ್ಮ ಮಾಣಿಕರಾವ್ ಮದರಿಯವರ 5ನೇ ಪುಣ್ಯಸ್ಮರಣೆ ಹಾಗೂ ಅಕ್ಕಮಹಾದೇವಿ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಸಿದ್ದರಾಮ ಹೊನ್ಕಲ್ ಸ್ವಾಗತಿಸಿದರು. ಬಸವರಾಜ ವಂದಿಸಿದರು. ಭೀಮರಾಯ ನುಚ್ಚಿನ ಬಸವಮಾರ್ಗ ಹಾಡುಗಳನ್ನು ಪ್ರಸ್ತುತಪಡಿಸಿ, ಸ್ವಾಗತಿಸಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರೂಪಿಸಿದರು.
ಮಲ್ಲಣ್ಣ ನಾಗರಾಳ, ಸಿದ್ರಾಮಪ್ಪ ಬಾಲಪ್ಪಗೋಳ್, ಸಂಗಣ್ಣ ದೋರನಹಳ್ಳಿ , ಗುರಣ್ಣ ಮದರಿ, ಮಹಾದೇವಪ್ಪ ಗಾಳೇನೋರ, ಬಸವರಾಜ ಹಿರೇಮಠ, ಅಡಿವೆಪ್ಪ ಜಾಕಾ, ಚೆನ್ನಪ್ಪ ಗುಂಡಾನೋರ, ವಿಶ್ವನಾಥ ರಘು, ಮಲ್ಲರಡ್ಡೆಪ್ಪ ಮಾಸ್ಟರ್, ಅಯ್ಯಪ್ಪ ವಟಾರ, ಭೀಮರಡ್ಡಿ ಭೈರಡ್ಡಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement