ಕೆಂಭಾವಿ ತಾಲೂಕು ರಚನೆಗೆ ಸಿದ್ಧ: ಶೆಟ್ಟರ್
ಕೆಂಭಾವಿ: 1978ರಿಂದ ಯಾವ ಸರ್ಕಾರಗಳೂ ತಾಲೂಕು ರಚನೆ ಘೋಷಣೆ ಮಾಡಿಲ್ಲ. ಆದರೆ ಬಿಜೆಪಿ ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ 43 ತಾಲೂಕುಗಳನ್ನು ಘೋಷಣೆ ಮಾಡಿದೆ. ಕೆಂಭಾವಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಪ್ರಸ್ತಾವನೆ ಸರಿಯಾಗಿ ಬಾರದ ಕಾರಣ ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಸಮಗ್ರ ವರದಿ ತರಿಸಿಕೊಂಡು ಇದನ್ನು ತಾಲೂಕು ಕೇಂದ್ರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭರವಸೆ ನೀಡಿದರು.
ಕೆಂಭಾವಿಯಲ್ಲಿ ಶಹಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣಗೌಡ ಮಲ್ಲಾಬಾದಿ ಪರವಾಗಿ ಪ್ರಚಾರ ಮಾಡಿದ ಅವರು, ಕಾಂಗ್ರೆಸ್ನ ರಾಹುಲ್ಗಾಂಧಿ ಮೇಲೆ ವಾಗ್ದಾಳಿ ನಡೆಸಿದರು.
ರಾಹುಲ್ಗೆ ಶೆಟ್ಟರ್ ಟಾಂಗ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ಬಿಡುಗಡೆ ಮಾಡುವುದಾಗಿ ಬಿಜಾಪುರದಲ್ಲಿ ಹೇಳಿರುವುದು ಹಸ್ಯಾಸ್ಪದ. ಈಗ ಕೇಂದ್ರದಲ್ಲಿರುವುದು ಕಾಂಗ್ರೆಸ್ ಸರ್ಕಾರವೇ ಆಗಿದ್ದರೂ ಅಭಿವೃದ್ಧಿಗಾಗಿ ಹಣ ನೀಡಲು ಬೇಡ ಎಂದವರಾರು. ರಾಹುಲ್ ಗಾಂಧಿಯವರಿಗೆ ಕೇವಲ ಬರೆದು ಕೊಟ್ಟ ಭಾಷಣ ಮಾಡಲು ಬರುತ್ತದೆಯೇ ಹೊರತು ಈ ಭಾಗದ ರೈತರ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿಲ್ಲ ಎಂದು ವ್ಯಂಗ್ಯವಾಡಿದರು.