ಕೆಜೆಪಿ ಅಧಿಕಾರಕ್ಕೆ: ಮುಕುಡಪ್ಪ ವಿಶ್ವಾಸ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.27
ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷವು ಅಚ್ಚರಿಯ ಫಲಿತಾಂಶ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಯಡಿಯೂರಪ್ಪ ಸಿಎಂ ಆಗಲಿದ್ದಾರೆಂದು ಕೆಜೆಪಿ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮುಕುಡಪ್ಪ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೆಜೆಪಿ ಅಲೆ ಇದೆ. ಬಿ.ಎಸ್. ಯಡಿಯೂರಪ್ಪ ಮಾಡಿದ ಸಾಧನೆಯೇ ಪಕ್ಷದ ಗೆಲವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಎಲ್ಲ ಜಾತಿಗೆ ಆದ್ಯತೆ: ಒಟ್ಟು 205 ಕ್ಷೇತ್ರಗಳ ಪೈಕಿ 80 ಯುವಕರಿಗೆ, 13 ಮಹಿಳೆಯರಿಗೆ, 11 ಮುಸ್ಲಿಮರಿಗೆ, 20 ಹಿಂದುಳಿದವರಿಗೆ, 38 ಎಸ್ಸಿ, ಎಸ್ಟಿ ವರ್ಗಗಳಿಗೆ ಟಿಕೆಟ್ ನೀಡುವ ಮೂಲಕ ಕೆಜೆಪಿ ಪಕ್ಷವು ಎಲ್ಲ ಜಾತಿ ಜನಾಂಗಗಳಿಗೆ ಆದ್ಯತೆ ನೀಡಿದೆ ಎಂದರು. ಭಾಗ್ಯಲಕ್ಷ್ಮಿ ಮತ್ತು ಮಹಿಳೆಯರಿಗೆ ಹೆರಿಗೆ ಕಿಟ್ ಯೋಜನೆಗಳಿಂದ ರಾಜ್ಯದ ಮಹಿಳೆಯರು ಯಡಿಯೂರಪ್ಪ ಮತ್ತೆ ಸಿಎಂ ಆಗಲಿ ಎಂಬ ಮಹಾದಾಸೆ ಹೊಂದಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ಶೇ. 50ರಷ್ಟು ಮಹಿಳೆಯರಿದ್ದು, ಅವರೆಲ್ಲ ಕೆಜೆಪಿಗೆ ಮತ ನೀಡುವ ಮೂಲಕ ಅಚ್ಚರಿಯ ಫಲಿತಾಂಶ ನೀಡಲಿದ್ದಾರೆ ಎಂದರು.
ಮತ ನೀಡುವಂತೆ ಮನವಿ: ರಾಜ್ಯದ ಉತ್ತರ
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಬಲಿಷ್ಠಗೊಳ್ಳಲು ಅದು ಯಡಿಯೂರಪ್ಪ ಒಬ್ಬರಿಂದ ಮಾತ್ರ ಸಾಧ್ಯ. ಈ ವಾಸ್ತವ ಸಂಗತಿಯನ್ನು ಅರಿತ ಯುವ ಪಡೆ ಕೆಜೆಪಿ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಬಾಬುರಾವ ಮುಡುಬಿ, ಎಲ್.ಎಸ್. ರಾಠೋಡ, ರಾಜ್ಯ ಪ್ರಧಾನ ಕಾರ್ಯದರ್ಶಿ ತಿಪ್ಪಣಪ್ಪ ಕಮಕನೂರ, ಎಸ್ಸಿ ಘಟಕದ ರಾಜ್ಯ ಉಪಾಧ್ಯಕ್ಷ ಎಸ್.ಜಿ. ಭಾರತಿ ಇತರರಿದ್ದರು.