ನೇರ ಜನ ಸಂಪರ್ಕವೇ ಪರಿಣಾಮಕಾರಿ ಮಾಧ್ಯಮ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.27
ಪ್ರಸಕ್ತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನೇರ ಜನಸಂಪರ್ಕವೇ ಪರಿಣಾಮಕಾರಿ ಮಾಧ್ಯಮವಾಗಿದ್ದು, ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಕ್ಷೇತ್ರದ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಕರೆ ನೀಡಿದರು.
ನಗರದಲ್ಲಿ ಸಂಗಮೇಶ್ವರ ಸಭಾಂಗಣದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಮಾಧ್ಯಮಗಳಲ್ಲಿ ಪ್ರಚಾರ, ಜಾಹೀರಾತು ಮತ್ತು ಸಾರ್ವಜನಿಕ ಪ್ರಚಾರ ಸಭೆ, ಸಮಾರಂಭಗಳು ಅಗತ್ಯ. ಇದರ ಜತೆಗೆ ಮತದಾರರಿಗೆ ನೇರವಾಗಿ ಸಂಪರ್ಕಿಸಿ ಮತಯಾಚನೆ ಮಾಡಿದರೆ ಪರಿಣಾಮಕಾರಿಯಾಗಿ ಫಲಿತಾಂಶ ಹೊರಬೀಳಲಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಗಮನಹರಿಸಿ ಎಂದರು.
ಮನೆಗೆ ತೆರಳಿ ಮನವರಿಗೆ ಮಾಡಿ: ಪ್ರಸ್ತುತ ಚುನಾವಣಾ ಸಂದರ್ಭದಲ್ಲಿ ಆರೋಪ, ಪ್ರತ್ಯಾರೋಪಗಳ ಭರಟೆ ಮಾಧ್ಯಮಗಳಲ್ಲಿ ಸಹಜವಾಗಿ ಬರುತ್ತವೆ ಎಂಬ ಕಲ್ಪನೆಯಿಂದ ಜನತೆ ಮಾಧ್ಯಮಗಳ ಕಡೆಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಹೀಗಾಗಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಸರ್ಕಾರ ಜನಪರವಾಗಿ ಕೈಗೊಂಡಿರುವ ಸಾಧನೆ ಮತ್ತು ಪ್ರತಿ ಪಕ್ಷಗಳು ಕೈಗೊಳ್ಳುತ್ತಿರುವ ಜನವಿರೋಧಿ ನೀತಿಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಬೇಕು ಎಂದರು.
ಬಿಜೆಪಿ ಪಕ್ಷವೊಂದು ಮನೆ ಇದ್ದಂತೆ. ಮನೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ.
ಅವುಗಳನ್ನು ಬಗೆಹರಿಸಿಕೊಂಡು ಉತ್ತಮ ಆದರ್ಶ ಕುಟುಂಬ ನಿರ್ವಹಣೆಯಾಗಬೇಕು. ಕೆಲವು ಕಾರಣಗಳಿಂದ ಮುನಿಸಿಕೊಂಡು ಹೋದ ಮುಖಂಡ, ಕಾರ್ಯಕರ್ತರ ಬಳಿಗೆ ತೆರಳಿ ಅವರನ್ನು ಮನವೊಲಿಸಿ ಮತ್ತೆ ಕುಟುಂಬಕ್ಕೆ ಕರೆತರುವ ಪ್ರಯತ್ನ ಮಾಡುವುದರೊಂದಿಗೆ ಅವರಿಗೆ ತಮ್ಮ ಬಡಾವಣೆ, ಗ್ರಾಮ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಪ್ರಚಾರ ಕೈಗೊಳ್ಳಲು ಜವಾಬ್ದಾರಿ ವಹಿಸುವ ಕೆಲಸ ಮಾಡಲು ಸಲಹೆ ನೀಡಿದರು.
ಭ್ರಷ್ಟತೆಯೇ ಪ್ರತಿಬಿಂಬ, ಅಭಿವೃದ್ಧಿ ಗೌಣ: ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡು ಸಾಧನೆ ಮಾಡಿದೆ. ಆದರೆ, ಪಕ್ಷದಲ್ಲಿರುವ ಕೆಲವು ಆಂತರಿಕ ಜಗಳ, ಪಕ್ಷದ ಕೆಲವು ನಾಯಕರ ಭ್ರಷ್ಟತೆಯೇ ಪ್ರತಿಬಿಂಬಿಸಲಾಗುತ್ತಿದೆ. ಹೊರತಾಗಿ ಸಾಧನೆ ಬಗ್ಗೆ ಪ್ರಚಾರ ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಭ್ರಷ್ಟರನ್ನು ದೂರವಿಟ್ಟು ಈ ವಿಧಾನಸಭೆ ಚುನಾವಣೆ ನಡೆಸಲಾಗುತ್ತಿದೆ. ಪಕ್ಷದಲ್ಲಿ ಗೊಂದಲ ಸೃಷ್ಟಿಸುವವರು ಪಕ್ಷದಿಂದ ಹೊರಹೋಗಿದ್ದಾರೆ. ಇದೀಗ ಪಕ್ಷದಲ್ಲಿ ಯಾವುದೇ ಗೊಂದಲದ ವಾತಾವರಣ ಇಲ್ಲ. ಬಿಜೆಪಿ ಸರ್ಕಾರದ ಸಾಧನೆ ನೋಡಿ ಮತದಾರರು ಮತ ನೀಡುವ ಮೂಲಕ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಕ್ಷೇತ್ರಗಳ ಅಭಿವೃದ್ಧಿಗೆ ಸಹಕರಿಸಿ: ಗುಲ್ಬರ್ಗ ಉತ್ತರ ಕ್ಷೇತ್ರಕ್ಕೆ ರಾಜಗೋಪಾಲ ರೆಡ್ಡಿ ಮತ್ತು ದಕ್ಷಿಣ ಕ್ಷೇತ್ರಕ್ಕೆ ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು ಕಣಕ್ಕಿಳಿಸಲಾಗಿದ್ದು, ಈ ಇಬ್ಬರು ನಾಯಕರನ್ನು ಗೆಲ್ಲಿಸುವ ಮೂಲಕ ಈ ಕ್ಷೇತ್ರಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಬಿ. ಶಾಣಪ್ಪ, ಮುಖಂಡರಾದ ಬಿ.ಜಿ. ಪಾಟೀಲ್, ಡಾ. ಇಂದಿರಾ ಶಕ್ತಿ, ಶಾಮರಾವ ಪ್ಯಾಟಿ, ದಯಾಘನ ಧಾರವಾಡಕರ್, ಶಿವಾನಂದ ಕಲ್ಲೂರ, ಅನೀಲ್ ಜಾಧವ ಇತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ವೇಳೆ ಭಾರತೀಯ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಶಂಕರ ಜಾಧವ ಅವರು ಬಿಜೆಪಿ ಸೇರ್ಪಡೆಯಾದರು. ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಪಕ್ಷಕ್ಕೆ ಬರಮಾಡಿಕೊಂಡರು.