ಬಿಜೆಪಿ ಭ್ರಷ್ಟಾಚಾರಕ್ಕೆ ಬೇಸತ್ತ ಜನತೆ: ಖರ್ಗೆ
ಗುಲ್ಬರ್ಗ/ಶಹಾಬಾದ್: ಬಿಜೆಪಿ ಸರ್ಕಾರದ ಆಡಳಿತದಲ್ಲಿ ನಿರಂತರ ಹಸ್ತಕ್ಷೇಪ, ಅಧಿಕ ಲಂಚಗುಳಿತನ, ಶಾಸಕ, ಸಚಿವರ ಭ್ರಷ್ಟಾಚಾರದಿಂತ ಬೇಸತ್ತ ಜನತೆ ಇಂದು ಕಾಂಗ್ರೆಸ್ ಪಕ್ಷದತ್ತ ನೋಡುತ್ತಿದ್ದಾರೆ.
ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಮಜೀದ್ ಚೌಕನಲ್ಲಿ ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ಅಭ್ಯರ್ಥಿ ಜಿ. ರಾಮಕೃಷ್ಣ ಪರ ಬಹಿರಂಗ ಪ್ರಚಾರ ಭಾಷಣ ಮಾಡಿದ ಅವರು, ಇಂದು ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದ ಹುಟ್ಟಿದ ಕೂಸು ಕೆಜೆಪಿ ಮತ್ತು ಬಿಎಸ್ಆರ್. ಇಂದು ನಾವು ಬೇರೆ ಎಂದು ಹೇಳಿಕೊಳ್ಳುತ್ತಿವೆ. 40 ವರ್ಷ ಬಿಜೆಪಿಯಲ್ಲಿ ಬೆಳೆದು ಅದೇ ರಕ್ತ, ಮಾಂಸದಿಂದ ಬೆಳೆದ ಯಡಿಯೂರಪ್ಪ ಇನ್ನು 20 ವರ್ಷ ನಮ್ಮನ್ನು ಅಲಗಾಡಿಸಲು ಸಾಧ್ಯವಿಲ್ಲ ಎಂದವರು ಪಕ್ಷದಿಂದ ಹೊರಹೋಗಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಪಕ್ಷದಿಂದ ಹೊರಬಂದರೆ ಹೊರತು ಯಾವುದೇ ತತ್ವ ಆಧಾರಕ್ಕಾಗಲಿ, ಬಡವರ ಅನ್ಯಾಯಕ್ಕಾಗಲಿ ಹೊರಬಂದಿಲ್ಲ ಎಂದರು. ರಾಜ್ಯದಲ್ಲಿ ಸ್ವಜನಪಕ್ಷಪಾತದಿಂದ ಕಾನೂನು ವ್ಯವಸ್ಥೆ ಹದಗೆಟ್ಟು ಹೋಗಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕಡು ಬಡವರಿಗೆ ಪ್ರತಿ ಕೆಜಿಗೆ ಒಂದು ರು. ದರದಲ್ಲಿ ಮಾಸಿಕ 30 ಕೆ.ಜಿ ಅಕ್ಕಿ ನೀಡಲಾಗುವುದು. ರಾಷ್ಟ್ರದ, ದೇಶದ ಹಿತಕ್ಕಾಗಿ ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷದ ಚಿಹ್ನೆ ಹಸ್ತಕ್ಕೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಸಂಸದ ಧರ್ಮಸಿಂಗ್ ಮಾತನಾಡಿ, ಗುಲ್ಬರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಿರುವ ಜಿ.ರಾಮಕೃಷ್ಣ ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಅವರಿಂದ ಮಾತ್ರ ಈ ಮತಕ್ಷೇತ್ರದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ಚಂದ್ರಿಕಾ ಪರಮೇಶ್ವರ, ಅಭ್ಯರ್ಥಿ ಜಿ. ರಾಮಕೃಷ್ಣ, ಬ್ಲಾಕ್ ಅಧ್ಯಕ್ಷ ಡಾ. ಎಂ.ಎ.ರಶೀದ್, ಸಂತೋಷಕುಮಾರ ಇಂಗಿನಶೆಟ್ಟಿ ಇತರರು ಇದ್ದರು.