ಮತ ರಾಜಕೀಯ ಲೆಕ್ಕಾಚಾರ, ಎಡ -ಬಲ ಯಾರಿಗೆ ಬೆಂಬಲ
ಚಿಂಚೋಳಿ: ಚಿಂಚೋಳಿ (ಪ.ಜಾ) ಮೀಸಲು ವಿಧಾನಸಭೆ ಮತಕ್ಷೇತ್ರದ ಚುನಾವಣೆಯಲ್ಲಿ ಜಾತಿಮತಗಳ ಹಿನ್ನೆಲೆಯಲ್ಲಿ ಮತ ವಿಭಜನೆ ಲೆಕ್ಕಾಚಾರ ಭರದಿಂದ ಸಾಗಿದೆ. ಎಸ್ಸಿ ಮತಗಳೇ ಅಧಿಕವಾಗಿರುವ ಇಲ್ಲಿ ಆಂತರಿಕ ಎಡ- ಬಲ ಗುಂಪುಗಳ ಬೆಂಬಲ ಯಾರಿಗೆ ಎಂಬ ಚರ್ಚೆ ಆರಂಭವಾಗಿದೆ.
ಸ್ಥಳೀಯ ದಲಿತ ಸಮುದಾಯದ ಮುಖಂಡ, ಬಿಜೆಪಿ ಅಭ್ಯರ್ಥಿ ರಮೇಶ ಯಾಕಾಪುರ ಅವರು ಸೇರಿದಂತೆ ಕಣದಲ್ಲಿರುವ ಯಾರಿಗೆ ಎಷ್ಟು ಮತಗಳು ಬರಲಿವೆ ಎಂಬ ಲೆಕ್ಕ ಕಾರ್ಯಕರ್ತರು, ಸಾಮಾನ್ಯ ಜನರಲ್ಲಿ ಸಾಗಿದೆ. ದಲಿತ ಸಮುದಾಯದ ಮತಗಳು ಹೆಚ್ಚಿನ ಪ್ರಯೋಜನವಾಗಲಿದ್ದು, ದಲಿತ ವರ್ಗದ ಮತಗಳನ್ನು ಸೆಳೆದುಕೊಳ್ಳಲು ವಿವಿಧ ಪಕ್ಷಗಳ ಮುಖಂಡರು ತಂತ್ರಗಾರಿಕೆಯನ್ನು ರೂಪಿಸುತ್ತಿದ್ದಾರೆ.
6 ಜನ ಲಂಬಾಣಿ ವರ್ಗಕ್ಕೆ: ಚಿಂಚೋಳಿ ಮೀಸಲು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ 12 ಅಭ್ಯರ್ಥಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಗಾಜರೆ ಮತ್ತು ಪಕ್ಷೇತರ ಅಭ್ಯರ್ಥಿ ಬಸವರಾಜ ವಾಡಿ ಹೊರತು ಪಡಿಸಿ ಎಲ್ಲರೂ ಚಿತ್ತಾಪುರ ತಾಲೂಕಿನ 6 ಜನ ಲಂಬಾಣಿ ವರ್ಗಕ್ಕೆ ಸೇರಿದ್ದಾರೆ.
ತಾಲೂಕಿನಲ್ಲಿ ಜಾತಿ ಲೆಕ್ಕಾಚಾರದಲ್ಲಿ ಪರಿಶಿಷ್ಟ ಜಾತಿಯ ಎಡಗೈ ಮತ್ತು ಬಲಗೈ ಸಮುದಾಯದ ಒಟ್ಟು ಮತಗಳು ಅಂದಾಜು 45 ಸಾವಿರ ಅಧಿಕ ಮತಗಳಿವೆ. ದಲಿತ ವರ್ಗದ ಮತಗಳು ಹಿಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಓಟ್ ಬ್ಯಾಂಕ್ ಆಗಿದ್ದವು. ಆದರೆ ವಿಧಾನಸಭೆ ಕ್ಷೇತ್ರ ಪುನರ್ ವಿಂಗಡಣೆಯಾದ ಸಂದರ್ಭದಲ್ಲಿ ಮೀಸಲು ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಪರಿಶಿಷ್ಟ ಜಾತಿಯ (ಎಡ-ಬಲ) ಓಟುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಲಂಬಾಣಿ ಮತಗಳು 25 ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ.
ದಲಿತ ಮತಗಳ ಮೇಲೆ ಹೆಚ್ಚಿನ ಚಿತ್ತ: ಪ್ರಸಕ್ತ ಚುನಾವಣೆಯಲ್ಲಿ ಲಂಬಾಣಿ ಮತಗಳ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಡಾ. ಉಮೇಶ ಜಾಧವ ಅವಲಂಬಿತರಾಗಿದ್ದರೆ. ಇತ್ತ ಬಿಜೆಪಿ ಅಭ್ಯರ್ಥಿ ರಮೇಶ ಯಾಕಾಪುರ ದಲಿತ ವರ್ಗದ ಮತಗಳ ಮೇಲೆ ಹೆಚ್ಚಿನ ಚಿತ್ತವಿಟ್ಟವರಾಗಿದ್ದಾರೆ.ಚಿಂಚೋಳಿ ಮತಕ್ಷೇತ್ರಕ್ಕೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ದಲಿತ ವರ್ಗದ ಮತಗಳೇ ಗೆಲ್ಲುವ ಅಭ್ಯರ್ಥಿಗಳಿಗೆ ನಿರ್ಣಾಯಕವಾಗಿದ್ದವು. ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ್, ಮಾಜಿ ಸಚಿವ ದಿ. ದೇವೇಂದ್ರಪ್ಪ ಜಮಾದಾರ, ಮಾಜಿ ಶಾಸಕ ಎಂ.ವೀರಯ್ಯ ಸ್ವಾಮಿ, ಮಾಜಿ ಸಚಿವ ವೈಜನಾಥ ಪಾಟೀಲ್, ಮಾಜಿ ಶಾಸಕರಾದ ಕೈಲಾಸನಾಥ ಪಾಟೀಲ್ ಮತ್ತು ಮಾಜಿ ಸುನೀಲ್ ವಲ್ಯಾಪುರೆ ಅವರ ಗೆಲುವಿನಲ್ಲೂ ಸಹ ಬೆಂಬಲ ನೀಡಿದ್ದರು.
ದಲಿತ ವರ್ಗದ ಮುಖಂಡರು- ಸಮಾಜದ ಮತಗಳು ಯಾರಿಗೆ ಬಲ ತುಂಬಲಿವೆ ಎಂಬುದೇ ನಿಗೂಢ. ಕಾಂಗ್ರೆಸ್‌ನ ಡಾ. ಉಮೇಶ, ಕೆಜೆಪಿಯ ಸುನೀಲ ವಲ್ಯಾಪುರೆ ದಲಿತ ಮತಗಳ ಮೇಲೆ ನಿಗಾ ಇಟ್ಟಿದ್ದು ಸಾಧ್ಯವಾದಷ್ಟು ಅವುಗಳನ್ನು ಹೊಂದುವ ಹವಣಿಕೆಯಲ್ಲಿದ್ದಾರೆ.