ಮತದಾನದ ಮಹತ್ವ; ಬೀದಿನಾಟಕಕ್ಕೆ ಚಾಲನೆ
ಕ.ಪ್ರ. ವಾರ್ತೆ ಯಾದಗಿರಿ ಏ.27
ಸ್ವೀಪ್ ಕಾರ್ಯಚಟುವಟಿಕೆಗಳ ಅಂಗವಾಗಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ದಿಶೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮಾಡಲಿರುವ ಬೀದಿನಾಟಕ ಪ್ರದರ್ಶನಕ್ಕೆ ಬಳಿಚಕ್ರ ಗ್ರಾಮದಲ್ಲಿ ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಎ. ಜಿಲಾನಿ ಚಾಲನೆ ನೀಡಿದರು.
ಬಳಿಚಕ್ರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮತದಾರರು ಮತಗಟ್ಟೆಗೆ ತೆರಳಿ ಸ್ವಯಂ ಪ್ರೇರಣೆಯಿಂದ ಮತಚಲಾಯಿಸಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬಾರದು. ಯಶಸ್ವಿ ಪ್ರಜಾಪ್ರಭುತ್ವಕ್ಕೆ ಮತದಾನದ ಹಕ್ಕನ್ನು ಬಳಸಬೇಕು. ಮತದಾನವು ಪ್ರತಿಯೊಬ್ಬರ ನೈತಿಕ ಹಕ್ಕು ಹಾಗೂ ಮತ ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯ ಮತ್ತು ಪ್ರತಿಯೊಬ್ಬ ಸಂವಿಧಾನ ಬದ್ಧ ಹಕ್ಕು ಆಗಿದೆ ಎಂಬ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಜಿಪಂ ಸಿಇಒ ಎಸ್.ಎ. ಜಿಲಾನಿ ಮಾತನಾಡಿ, ಶೇ. 50ಕ್ಕಿಂತ ಕಡಿಮೆ ಮತದಾನವಾಗಿರುವ ಗ್ರಾಮಗಳಲ್ಲಿ ಮತದಾನದ ಮಹತ್ವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೆಚ್ಚಿನ ಮತದಾನವಾದಲ್ಲಿ ಯೋಗ್ಯ ಅಭ್ಯರ್ಥಿ ಮತ್ತು ನಾಯಕರನ್ನು ಆಯ್ಕೆ ಮಾಡಿ ತರಲು ಸಹಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು, 18 ವರ್ಷ ಪೂರೈಸಿದ ಯುವಕರು ತಪ್ಪದೇ ಮತ ಚಲಾಯಿಸಬೇಕು. ಮೇ 5ರಂದು ಇರುವ ಸಾರ್ವತ್ರಿಕ ಚುನಾವಣೆಯಂದು ತಪ್ಪದೇ ಮತ ಚಲಾಯಿಸುವಂತೆ ಮನವಿ ಮಾಡಿದರು. ಡಿಎಚ್‌ಓ ಮಲ್ಲಿಕಾರ್ಜುನ ಮುಕ್ಕಾ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಕೃತಿ ಕಲಾ ತಂಡದಿಂದ ಮತದಾನದ ಮಹತ್ವದ ಬಗ್ಗೆ ಪ್ರದರ್ಶಿಸಿದ ಬೀದಿನಾಟಕ ಜನರ ಮೆಚ್ಚುಗೆಗೆ ಪಾತ್ರವಾಯಿತು. ತಾಪಂ ಇಒ ಶಿವರಾಮ ಚವ್ಹಾಣ, ವಾರ್ತಾಧಿಕಾರಿ ಸುಲೇಮಾನ ನದಾಫ್, ಎಪಿಒ ಸತೀಶಕುಮಾರ, ಸೂಗಪ್ಪ ಪಾಟೀಲ ಇತರರು ಇದ್ದರು.