ಸುದ್ದಿ ಸಂಕ್ಷೇಪ
ಕೆಜೆಪಿ- ಬಿಜೆಪಿ ಒಂದೇ ನಾಣ್ಯದ ಎರಡು ಮುಖ: ಗಾಜರೆ
ಚಿಂಚೋಳಿ: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಕೆಜೆಪಿ- ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರು ಮತದಾರರಿಗೆ ಹಣದ ಅಮಿಷ ನೀಡಿ ಮತ ಪಡೆಯುವ ತಂತ್ರಗಾರಿಗೆ ನಡೆಸುತ್ತಿದ್ದಾರೆ ಎಂದು ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಗಾಜರೆ ಆರೋಪಿಸಿದರು. ತಾಲೂಕಿನ ಐನೋಳಿ, ದೇಗಲಮಡಿ, ಪಟಪಳ್ಳಿ, ಕೊಳ್ಳೂರ, ನಾಗಾಇದಲಾಯಿ, ಚಂದ್ರಂಪಳ್ಳಿ, ಹಸರಗುಂಡಗಿ ಮುಂತಾದ ಕಡೆಗಳಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಎಲ್ಲ ಅಭಿವೃದ್ಧಿ ಕಾಮಗಾರಿಗಳು ತುಂಬಾ ಕಳಪೆಯಾಗಿ ಮಾಡಿ ಹಣವನ್ನು ಲೂಟಿ ಮಾಡಿದ ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗಿದೆ ಎಂದರು. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕೆಂಬ ಜನರ ಆಪೇಕ್ಷೆಯಾಗಿದೆ, ಅವರು ಅಧಿಕಾರದಲ್ಲಿ ಕೈಕೊಂಡಿರುವ ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳೇ ನನ್ನ ಗೆಲವಿಗೆ ಶ್ರೀರಕ್ಷೆಯಾಗಲಿವೆ ಎಂದರು. ತಾಲೂಕು ಜೆಡಿಎಸ್ ಮುಖಂಡ ಶೇಖ್ ಭಕ್ತಿಯಾರ್ ಜಾಹಾಗೀರದಾರ, ಎಸ್.ಕೆ ಆರ್ಟ, ಜಗದೀಶ ಗೊಣಗಿ, ವಿನೋದ ದುದ್ದಗಿಮಠ ಇತರರು ಉಪಸ್ಥಿತರಿದ್ದರು.
ನಾಳೆ ಸೇಡಂಗೆ ಎಲ್.ಕೆ. ಆಡ್ವಾಣಿ
ಗುಲ್ಬರ್ಗ: ಬಿಜೆಪಿ ರಾಷ್ಟ್ರೀಯ ಹಿರಿಯ ನಾಯಕ, ಮಾಜಿ ಪ್ರಧಾನಿ ಎಲ್.ಕೆ. ಆಡ್ವಾಣಿ ಅವರು ಏ.29ರಂದು ಸೇಡಂಗೆ ಆಗಮಿಸಲಿದ್ದಾರೆ. ಅಂದು ಬೆ.10.30ಕ್ಕೆ ಸೇಡಂ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜಕುಮಾರ ತೇಲ್ಕೂರ್ ಪರವಾಗಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಕಾರ್ಯಕರ್ತರು, ಮತದಾರರು ಭಾಗವಹಿಸಬೇಕೆಂದು ನಾಮದೇವ ಕೋರಿದ್ದಾರೆ.
ಇಂದು ನಗರಕ್ಕೆ ಸುಷ್ಮಾ ಸ್ವರಾಜ್
ಗುಲ್ಬರ್ಗ: ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಏ.28 ರಂದು ಗುಲ್ಬರ್ಗಕ್ಕೆ ಆಗಮಿಸಲಿದ್ದಾರೆ. ಅಂದು ಸಂಜೆ 4ಕ್ಕೆ ನಗರದ ಎನ್.ವಿ. ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಲಿದ್ದಾರೆ. ಹೆಚ್ಚಿಗಿ ಸಾರ್ವಜನಿಕರು, ಕಾರ್ಯಕರ್ತರು ಭಾಗವಹಿಸಬೇಕೆಂದು ಕೋರಲಾಗಿದೆ.
ಸಂತೆಯಲ್ಲೂ ಪ್ರಚಾರ
ಗುಲ್ಬರ್ಗ: ಗುಲ್ಬರ್ಗ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಗೋಪಾಲರೆಡ್ಡಿ ಗುಲ್ಬರ್ಗ ಸಂತೆಯ ದಿನದಂದೂ ಸಂತೆಯಲ್ಲೇ ಬೆಂಬಲಿಗರೊಂದಿಗೆ ತೆರಳಿ ಅಲ್ಲಿ ಸೇರಿದ್ದ ವರ್ತಕರು, ಗ್ರಾಹಕರೆಲ್ಲರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಉಭಯಕುಶಲೋಪರಿ ವಿಚಾರಿಸುತ್ತ ತಮ್ಮನ್ನೇ ಬೆಂಬಲಿಸುವಂತೆ ಕೋರಿದರು. ನಗರ ಪ್ರಗತಿಗೆ ಬಿಜೆಪಿ ನೀಡಿರುವ ಅನುದಾನದ ಮಾಹಿತಿ ನೀಡುತ್ತ ಶೆಟ್ಟರ್ ಸಿಎಂ ಆಗಲು ತಾವೆಲ್ಲ ಬಿಜೆಪಿ ಬೆಂಬಲಿಸಲೇಬೇಕೆಂದು ಮನವಿ ಮಾಡಿದರು. ಗುಲ್ಬರ್ಗ ಸಂತೆ ನಡೆಯುವ ಪ್ರಕಾಶ ಚಿತ್ರಮಂಂದಿರ ಪ್ರದೇಶ ಗುಲ್ಬರ್ಗ ಉತ್ತರ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಸಂತೆಯ ಸಂದರ್ಭವನ್ನು ರಾಜಗೋಪಾಲರೆಡ್ಡಿ ಈ ರೀತಿ ಪಕ್ಷದ, ತಮ್ಮ ಪ್ರಚಾರಕ್ಕೆ ಸದುಪಯೋಗಪಡಿಸಿಕೊಂಡರು.